ಚಿತ್ರದುರ್ಗ: ಸಿರಿಗೆರೆ ತರಳಬಾಳು ಬೃಹನ್ಮಠದ ಹಿರಿಯ ಗುರುವಿನ ಮೇಲೂ ಹಿಂದೆ ಆರೋಪ ಮಾಡಿದವರಿದ್ದಾರೆ. ಈಗ ಆ ಶನಿ ಸಂತಾನವೇ ದೊಡ್ಡಮಟ್ಟದಲ್ಲಿ ಬೆಳೆದಿದೆ ಎಂದು ತಮ್ಮನ್ನು ಆರೋಪಿಸುವವರಿಗೆ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಪರೋಕ್ಷವಾಗಿ ತಿರುಗೇಟು ನೀಡಿದರು.
ಶ್ರೀಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಿಂ. ಶಿವಕುಮಾರ ಶಿವಾಚಾರ್ಯ ಶ್ರೀ ಅವರ 32ನೇ ಪುಣ್ಯಸ್ಮರಣೆಯ ಸಮಾರೋಪದ ನೇತೃತ್ವವಹಿಸಿ ಮಾತನಾಡಿದರು.
ಆತ್ಮ ನಿವೇದನೆಯನ್ನು ಕೆಲ ಶಿಷ್ಯರಿಗೆ ಹೇಳಿಕೊಟ್ಟಿದ್ದೇ ನಾವು. ಈಗ ನನ್ನ ವಿರುದ್ಧ ಭಸ್ಮಾಸುರರಾಗಿ ತಿರುಗಿ ಬಿದ್ದಿದ್ದಾರೆ. ಸ್ನೇಹಿತರು- ಹಿತೈಷಿಗಳ ನೆಪದಲ್ಲಿ ಕೆಲ ಶತ್ರುಗಳು ಪಕ್ಕದಲ್ಲೇ ಇರುತ್ತಾರೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕಿದೆ. ಒಳ್ಳೆಯ ಕಾರ್ಯಕ್ಕೆ ಅಡ್ಡಿಪಡಿಸುವ ಅಸಂತೃಪ್ತರ ಮಾತುಗಳಿಗೆ ಹೆಚ್ಚು ಮನ್ನಣೆ ನೀಡುವ ಅಗತ್ಯವಿಲ್ಲ ಎಂದು ತಮ್ಮನ್ನು ವಿರೋಧಿಸುತ್ತಿರುವವರಿಗೆ ಕುಟುಕಿದರು.
ತ್ಯಾಗ ಪತ್ರ ಕೊಟ್ಟಿರುವುದು ಒಂದು ಸೋಗು. ಇವರಿಗೆ ಅಧಿಕಾರ ಬಿಟ್ಟುಕೊಡಲು ಮನಸ್ಸಿಲ್ಲ. ಅದಕ್ಕಾಗಿ ಓದಿಸುವ ನೆಪದಲ್ಲಿ ಉತ್ತರಾಧಿಕಾರಿಯನ್ನು ಸಾಗಿ ಹಾಕಿದ್ದಾರೆ ಎಂದು ಶಿವಕುಮಾರ ಶಿವಾಚಾರ್ಯ ಶ್ರೀಗಳನ್ನೂ ನಿಂದಿಸಿದ್ದುಂಟು. ಸ್ವಾರ್ಥವೂ ಸಿಗದಿದ್ದರೆ ದೂಷಿಸುತ್ತಾರೆ. ಸಿಕ್ಕರೆ ಹೊಗಳುತ್ತಾರೆ. ಅಂಥವರ ಹೊಗಳಿಕೆ, ಉಗುಳಿಕೆಗೆ ಯಾವ ಬೆಲೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನೀವು ಅಂಜುಬುರುಕರಾದರೆ, ದುರ್ಬಲರಾದರೆ, ತಲೆಯ ಮೇಲೆ ಕಾಲಿಡುತ್ತಾರೆ. ನೀವು ಧೈರ್ಯಶಾಲಿಯಾದರೆ, ಎದೆಗುಂದದೆ ಗಂಡೆದೆ ಉಳ್ಳವರಾದರೆ, ನಿಮ್ಮ ಕಾಲಿನ ಬೂಟು ತಿಕ್ಕುತ್ತಾರೆ ಎಂದು ಹಿರಿಯ ಗುರುಗಳು ಹೇಳಿದ್ದರು. ನೊಂದಿದ್ದರಿಂದಲೇ ಈ ಮಾತನ್ನು ಖಾಸಗಿಯಾಗಿ ಅವರು ನನ್ನ ಬಳಿ ಹಂಚಿಕೊಂಡಿದ್ದರು. ಅಂತರಂಗ-ಆತ್ಮ ಶುದ್ಧಿ ಇರುವವರು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದರು.