ನ್ಯೂಸ್

ಆರೋಪಿ ಮಲ್ಲಿಕಾರ್ಜುನಸ್ವಾಮಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಿ

ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಮೈಸೂರಿನ ಲೋಕಾಯುಕ್ತ ಕಚೇರಿಗೆ ಸಿ.ಸಿ. ಟಿವಿ ಕ್ಯಾಮರಾ ಅಳವಡಿಸದಿರುವ ಬಗ್ಗೆ ಹಾಗೂ ಮಂಗಳವಾರ ರಾತ್ರಿ ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣದ ಎ3 ಆರೋಪಿ ಮಲ್ಲಿಕಾರ್ಜುನಸ್ವಾಮಿ ತನಿಖಾಧಿಕಾರಿಯನ್ನು ಭೇಟಿ ಮಾಡಿದ ಬಗ್ಗೆ ವಿಚಾರಣೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ನನ್ನ ದೂರು ಅರ್ಜಿಯನ್ನು ಆಧರಿಸಿ, ಮೈಸೂರಿನ ಲೋಕಾಯುಕ್ತ ಠಾಣೆಯಲ್ಲಿ 11/2024 ಸಂಖ್ಯೆಯ ಪ್ರಕರಣ ದಾಖಲಾಗಿದೆ. ಸದರಿ ಪ್ರಕರಣದ ತನಿಖಾಧಿಕಾರಿಯ ಬಗ್ಗೆ ಈ ಹಿಂದೆ ನಿಮಗೆ ಮನವಿಪತ್ರ ನೀಡಿ, ಮೈಸೂರಿನ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಉದೇಶ್ ಅವರ ಕರ್ತವ್ಯಲೋಪದ ವಿಚಾರಣೆ ನಡೆಸಿ, ಸೂಕ್ತ ಎಚ್ಚರಿಕೆ ನೀಡಿ, ನಿಮ್ಮ ನೇತೃತ್ವದಲ್ಲಿ ನನ್ನ ಅರ್ಜಿಗಳಲ್ಲಿನ ಅಂಶಗಳಿಗೆ ಸೂಕ್ತ ತನಿಖೆಯನ್ನು ನಡೆಸಿ, ಉಚ್ಚ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲು ಮನವಿ ಮಾಡಿಕೊಂಡಿದ್ದೆ.

ಎಲ್ಲ ತನಿಖಾ ಸಂಸ್ಥೆಯ ಕಚೇರಿಗಳಲ್ಲಿ ಸಿ.ಸಿ. ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಇದುವರೆವಿಗೂ ಸಿ.ಸಿ. ಟಿವಿ ಕ್ಯಾಮರಾ ಅಳವಡಿಸಿಲ್ಲ. ಕೆಲವು ದಿನಗಳ ಹಿಂದೆ ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಸಿ.ಸಿ. ಟಿವಿ ಕ್ಯಾಮರಾ ಅಳವಡಿಸುವಂತೆ ಮೌಖಿಕವಾಗಿ ಮನವಿ ಮಾಡಿಕೊಂಡಿದ್ದೆ. ಅಳವಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದ ಪೊಲೀಸ್ ಅಧೀಕ್ಷಕರು ಇದುವರೆವಿಗೂ ಕ್ರಮಹಿಸಿಲ್ಲ. ಇದರಿಂದಾಗಿ ಲೋಕಾ ಕಚೇರಿಯಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಆದ್ದರಿಂದ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಇದುವರೆವಿಗೂ ಸಿ.ಸಿ. ಟಿವಿ ಕ್ಯಾಮರಾ ಅಳವಡಿಸದಿರುವ ಬಗ್ಗೆ ವಿಚಾರಣೆ ನಡೆಸಿ, ಕೂಡಲೇ ಅಳವಡಿಸುವಂತೆ ಸೂಕ್ತ ಆದೇಶ ಮಾಡಬೇಕು ಎಂದು ಕೋರಿದ್ದಾರೆ.

ಮಂಗಳವಾರ (ನ.19) ಸಂಜೆ ಸುಮಾರು 7.30ರಲ್ಲಿ ಮುಡಾ ಪ್ರಕರಣದ 3ನೇ ಆರೋಪಿ ಮಲ್ಲಿಕಾರ್ಜುನಸ್ವಾಮಿ ಮೈಸೂರಿನ ಲೋಕಾಯುಕ್ತ ಕಚೇರಿಗೆ ತೆರಳಿ ತನಿಖಾಧಿಕಾರಿಯನ್ನು ಭೇಟಿ ಮಾಡಿರುವುದು ಸಾಕಷ್ಟು ಅನುಮಾನ ಮೂಡಿಸುತ್ತದೆ. ಆ ವೇಳೆ 3ನೇ ಆರೋಪಿ ಲೋಕಾಯುಕ್ತ ಕಚೇರಿಗೆ ಬಂದಿದ್ದು ಏಕೆ?, ರಾತ್ರಿ ಬರುವಂತಹ ತುರ್ತು ಏನಿತ್ತು?, ತನಿಖಾಧಿಕಾರಿಗಳೇ ದೂರವಾಣಿ ಕರೆ ಮಾಡಿದ್ದರೆ ಅಥವಾ ನೋಟಿಸ್ ನೀಡಿದ್ದರೆ? ಅಥವಾ ಸ್ವತಃ ಮಲ್ಲಿಕಾರ್ಜುನಸ್ವಾಮಿಯೇ ಬಂದಿದ್ದರೆ? ಅಷ್ಟು ರಾತ್ರಿಯಲ್ಲಿ ತನಿಖಾಧಿಕಾರಿ ಕಚೇರಿಯಲ್ಲಿ ಇರುವುದು ಮಲ್ಲಿಕಾರ್ಜುನಸ್ವಾಮಿಗೆ ಹೇಗೆ ಗೊತ್ತಾಯಿತು? ಎಂಬ ಅಂಶಗಳ ವಿಚಾರಣೆ ನಡೆಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.