ಕೋಲಾರ: ರಕ್ತದಾನ ಶ್ರೇಷ್ಠ ದಾನವಾಗಿದ್ದು, ಮನುಷ್ಯನ ಜೀವ ಉಳಿಸಲು ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಪ್ರಾದೇಶಿಕ ಸಂಯೋಜಕಿ ಸ್ಮಿತಾರಾಮ್ ತಿಳಿಸಿದರು.
ನಗರ ಹೊರವಲಯದ ಶ್ರೀದಾನಮ್ಮ ಚನ್ನಬಸಪ್ಪ ಪದವಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಏಡ್ಸ್ ನಿಯಂತ್ರಣ ಘಟಕದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ರಕ್ತದಾನ ಮಾಡಲು ಯುವಜನ ಹೆಚ್ಚಾಗಿ ಮುಂದೆ ಬರಬೇಕು. ಸಾರ್ವಜನಿಕರಿಗೆ ರಕ್ತದಾನದ ಬಗ್ಗೆ ಹೆಚ್ಚಾಗಿ ಅರಿವು ಮೂಡಿಸಬೇಕು. ಕಾರಣ ಕಳೆದ 2 ವರ್ಷದಿಂದ ಕರೊನಾ ಕಾರಣಕ್ಕಾಗಿ ಹೆಚ್ಚಾಗಿ ರಕ್ತ ಸಂಗ್ರಹವಾಗಿಲ್ಲ. ಇದರಿಂದ ತುರ್ತು ಸಂದರ್ಭಗಳಲ್ಲಿ ರಕ್ತಕ್ಕೆ ಬೇಡಿಕೆ ಇದ್ದು, ಆರೋಗ್ಯವಂತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದು ತಿಳಿಸಿದರು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಮಾತನಾಡಿ, ಈ ಬಾರಿ ರಕ್ತ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು, ಕೊಡುವವರ ಸಂಖ್ಯೆ ಕಡಿಮೆಯಾಗಿತ್ತು. 18 ವರ್ಷ ಮೇಲ್ಪಟ್ಟು 45 ವರ್ಷದೊಳಗಿನ 45 ಕೆ.ಜಿ ತೂಕ ಇರುವ ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಬಹುದು. 450 ಎಂಎಲ್ ರಕ್ತ ಮಾತ್ರ ತೆಗೆದುಕೊಳ್ಳಲಾಗುತ್ತದೆ. 24 ಗಂಟೆಯೊಳಗೆ ಇಷ್ಟೇ ಪ್ರಮಾಣದ ರಕ್ತವು ದೇಹದಲ್ಲಿ ವೃದ್ಧಿಯಾಗುತ್ತದೆ. ಪುರುಷರು ಪ್ರತಿ 3 ತಿಂಗಳಿಗೊಮ್ಮೆ, ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನದಿಂದ ರಕ್ತದೊತ್ತಡ, ಹೃದಯಾಘಾತ ಮುಂತಾದ ರೋಗಗಳನ್ನು ತಡೆಯಬಹುದಾಗಿದೆ. ಒಮ್ಮೆ ನಾವು ನೀಡುವ ರಕ್ತವು 4 ಜನರ ಜೀವ ಉಳಿಸಬಹುದು ಎಂದು ತಿಳಿಸಿದರು.
ಎಸ್ಸೆನ್ನಾರ್ ಆಸ್ವತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್ಕುಮಾರ್ ಮಾತನಾಡಿ, ರಕ್ತದಾನ ಮಾಡುವುದನ್ನು ಪ್ರತಿಯೊಬ್ಬರಊ ಹವ್ಯಾಸವನ್ನಾಗಿಸಿಕೊಳ್ಳಬೇಕು. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆ ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ಎಸ್ಡಿಸಿ ಕಾಲೇಜಿನ ಕಾರ್ಯದರ್ಶಿ ಉಷಾ ಗಂಗಾಧರ್ ಮಾತನಾಡಿ, ಕಾಲೇಜಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಸಂತಸದ ವಿಷಯವಾಗಿದೆ. ವಿದ್ಯಾರ್ಥಿಗಳು ಉತ್ಸುಕರಾಗಿ ರಕ್ತದಾನ ಮಾಡಲು ಮುಂದಾಗುತ್ತಿದ್ದಾರೆ. ಇಂತಹ ಶಿಬಿರವನ್ನು ಜಿಲ್ಲೆಯ ವಿವಿಧೆಡೆ ಆಯೋಜಿಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ರಕ್ತದಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಹೆಚ್ಚು ಬಾರಿ ರಕ್ತದಾನ ಮಾಡಿದ ಶ್ರೀನಿವಾಸ್, ನಾಗೇಶ್, ಸುರೇಶ್, ವಿಜಯ್ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಪ್ರಾಂಶುಪಾಲೆ ಪುಷ್ಪಲತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಕಾರ್ಯಕ್ರಮ ಸಂಯೋಜಕ ಕೊಟ್ರೇಶ್ ಮತ್ತಿತರರು ಇದ್ದರು.
ಆಸ್ಟ್ರೆಲಿಯಾ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೀನರ್ ಜನ್ಮದಿನದ ಜ್ಞಾಪಕಾರ್ಥ ಜೂ 14ರಂದು ರಕ್ತದಾನಿಗಳ ದಿನಾಚರಣೆ ಆಚರಿಸುತ್ತಿದ್ದೇವೆ. ಜಿಲ್ಲೆಯಲ್ಲಿ 16 ಲಕ್ಷ ಜನಸಂಖ್ಯೆ ಇದ್ದು, ಪ್ರತಿವರ್ಷ ಸುಮಾರು 16 ಸಾವಿರ ಯೂನಿಟ್ ರಕ್ತಬೇಕಾಗಿದ್ದು, ಅಷ್ಟು ರಕ್ತಸಂಗ್ರಹ ಕಠಿಣವಾಗಿದೆ. ಗರ್ಭಿಣಯರು, ಅಪಘಾತಕ್ಕೀಡಾದವರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು, ಹಿಮೋಪೀಲಿಯಾ, ಕ್ಯಾನ್ಸರ್ ಹಾಗೂ ತ್ಯಾಲಸ್ಮಿಯಾ ರೋಗಿಗಳಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇರುತ್ತದೆ. | ಡಾ.ಕಮಲಾ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ