ಸರಗೂರು: ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುವುದರ ಜತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಹೇಳಿದರು.
ಇಲ್ಲಿನ ಪಪಂ ಆವರಣದಲ್ಲಿ ಮಂಗಳವಾರ ಪ್ಲಾಸ್ಟಿಕ್ ಮುಕ್ತ ಅಭಿಯಾನ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ಲಾಸ್ಟಿಕ್ ಹಾಗೂ ಕಸಮುಕ್ತ ಸಮಾಜದೆಡೆಗೆ ಎಂಬ ಧ್ಯೇಯವಾಕ್ಯವನ್ನು ಎಲ್ಲರೂ ಪಾಲಿಸಬೇಕು ಎಂದರು.
ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ಕ್ಯಾರಿಬ್ಯಾಗ್‌ಗಳು ಭಿತ್ತಿಪತ್ರ, ತೋರಣ, ಪ್ಲಾಸ್ಟಿಕ್ ಲೋಟ, ಊಟದ ತಟ್ಟೆಗಳ ಕೆಳಗೆ ಹಾಕುವ ಪ್ಲಾಸ್ಟಿಕ್ ಹಾಳೆ, ಫ್ಲೆಕ್ಸ್, ಪ್ಲಾಸ್ಟಿಕ್ ಚಮಚ, ಬಾವುಟ, ಥರ್ಮಾಕೋಲ್‌ನಿಂದ ತಯಾರಾದ ವಸ್ತುಗಳ ಬಳಕೆಯಿಂದ ಪರಿಸರ, ಮಾನವ ಮತ್ತಿತರ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ರಾಜ್ಯ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ ಎಂದರು.
ಪಟ್ಟಣದ ವಿವಿಧ ಬೀದಿ ಬೀದಿಗಳಲ್ಲಿ ತೆರಳಿದ ಜಾಥಾ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ಕುರಿತು ಅರಿವು ಮೂಡಿಸಿತು. ಇದೇ ವೇಳೆ
ಪ್ರತಿ ಅಂಗಡಿಗಳಿಗೂ ತೆರಳಿದ ಪಪಂ ಸಿಬ್ಬಂದಿ, ಒಳಗೆ ಸಂಗ್ರಹಿಸಿ ಇಡಲಾಗಿದ್ದ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಂಡಿತಲ್ಲದೆ, ಪ್ಲಾಸ್ಟಿಕ್ ಬಳಸದಂತೆ ತಾಕೀತು ಮಾಡಿತು.
ಪಪಂ ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ರಾಮು, ಸದಸ್ಯರಾದ ಎಸ್.ಎಲ್.ರಾಜಣ್ಣ, ಚಲುವಕೃಷ್ಣ ನೂರಳಾಸ್ವಾಮಿ, ಶ್ರೀನಿವಾಸ, ಚೈತ್ರಾ ಸ್ವಾಮಿ, ಸಣ್ಣತಾಯಮ್ಮ, ದಿವ್ಯಾ ನವೀನ್, ಹೇಮಾವತಿ ರಮೇಶ್, ಶಿವಕುಮಾರ್, ಸಿಬ್ಬಂದಿ ಸಂತೋಷ್, ಪಳಿಣಿಸ್ವಾಮಿ, ಶಿವಪ್ರಸಾದ್, ವಸಂತಕುಮಾರಿ, ಅರುಣ್, ಮುಖಂಡರಾದ ಶ್ರೀನಾಥ್, ರಾಮಚಂದ್ರ ಇದ್ದರು.