ಬೀರೂರು: ಸರಳ ಯೋಗ ಸೂತ್ರಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಆಯುಷ್ ವೈದ್ಯ ಗವಿರಂಗಪ್ಪ ತಿಳಿಸಿದರು.
ಪಟ್ಟಣದ ರಾಜಾಜಿನಗರ ಗಣಪತಿ ದೇವಾಲಯ ಸಭಾಂಗಣದಲ್ಲಿ ಭಾನುವಾರ ಸುರಭಿ ಯೋಗ ಕೇಂದ್ರದಿಂದ ರಥಸಪ್ತಮಿ ಅಂಗವಾಗಿ ಆಯೋಜಿಸಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಆರೋಗ್ಯ ರಕ್ಷಣೆಯ ಸರಳ ಸೂತ್ರಗಳ ಕುರಿತಂತೆ ಮಾರ್ಗದರ್ಶನ ನೀಡಿದರು.
ಯೋಗ ಶಿಬಿರಾರ್ಥಿ ಹನುಮಂತರಾಜು ಮಾತನಾಡಿ, ನಮ್ಮ ಸನಾತನ ಪರಂಪರೆಯ ಯೋಗವಿದ್ಯೆ ಸಕಲ ರೋಗಕ್ಕೂ ರಾಮಬಾಣದಂತಿದೆ. ಹೀಗಾಗಿ ಎಲ್ಲರೂ ಯೋಗಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
ಸುರಭಿ ಯೋಗ ಕೇಂದ್ರದ ಶಿಕ್ಷಕಿ ಸಿತಾರಾ ಮಾತನಾಡಿ, ಸೂರ್ಯ ತನ್ನ ರಥದ ದಿಕ್ಕು ಬದಲಿಸುವ ಪರ್ವಕಾಲದಲ್ಲಿ ನಮ್ಮಲ್ಲಿನ ಅಂತಃಶಕ್ತಿಯನ್ನು ವೃದ್ಧಿಸಿಕೊಳ್ಳಲು ಸೂರ್ಯ ನಮಸ್ಕಾರ ಅತ್ಯಂತ ಶ್ರೇಷ್ಠವಾದುದು. 108 ಬಾರಿ ಸೂರ್ಯ ನಮಸ್ಕಾರ ಮಾಡಿದರೆ ಭಗವಂತನ ಪ್ರೇರಣೆ ನಮ್ಮೆಲ್ಲರಿಗೆ ದೊರಕಲಿದೆ ಎಂದರು.
ಶಿಕ್ಷಕ ಮಲ್ಲೇಶಪ್ಪ, ಸಂಪತ್‌ಕುಮಾರ್, ರವಿಕುಮಾರ್, ಸುರಭಿ ಯೋಗ ಕೇಂದ್ರದ ಶಿಬಿರಾರ್ಥಿಗಳು, ಮಕ್ಕಳು ಇದ್ದರು. ಪಾಲ್ಗೊಂಡಿದ್ದ ಎಲ್ಲರಿಗೂ ಪ್ರಶಂಸಾ ಪತ್ರ ವಿತರಿಸಲಾಯಿತು.