ಚಿತ್ರದುರ್ಗ: ಸಾರ್ವಜನಿಕರು ಆಯುಷ್ ಪದ್ಧತಿ ಚಿಕಿತ್ಸೆ ಅಳವಡಿಸಿಕೊಂಡು ಆರೋಗ್ಯಕರ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ಎಸ್. ನಾಗಸಮುದ್ರ ತಿಳಿಸಿದ್ದಾರೆ.
ಜಿಲ್ಲಾ ಆಯುಷ್ ಇಲಾಖೆ ಸಾರ್ವಜನಿಕರಿಗೆ ಜಿಲ್ಲಾದ್ಯಂತ ಆಯುರ್ವೇದ ಚಿಕಿತ್ಸಾಲಯಗಳ ಮೂಲಕ ಉಚಿತ ಚಿಕಿತ್ಸೆ ನೀಡುತ್ತಿದೆ ಎಂದರು.
ಜಿಲ್ಲೆಯಲ್ಲಿ 32 ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಿದ್ದು, ಎಲ್ಲ ವ್ಯಾಧಿಗಳಿಗೆ ಆಯುರ್ವೇದದ ಪ್ರಾಥಮಿಕ ಚಿಕಿತ್ಸೆಗಳು ಲಭ್ಯ ಇವೆ. ಇದರಲ್ಲಿ 10 ಚಿಕಿತ್ಸಾಲಯಗಳನ್ನು ಆಯುಷ್ ಆರೋಗ್ಯ ಮಂದಿರಗಳನ್ನಾಗಿ ಉನ್ನತೀಕರಿಸಲಾಗಿದೆ ಎಂದು ತಿಳಿಸಿದರು.
ಎಲ್ಲ ಕೇಂದ್ರಗಳಲ್ಲಿ ಚಿಕಿತ್ಸೆಯೊಂದಿಗೆ ರೋಗಾನುಸಾರ ಪಥ್ಯ, ಜೀವನಶೈಲಿ, ಯೋಗ, ಧ್ಯಾನ, ಪ್ರಾಣಾಯಾಮ ತಿಳಿಸಿಕೊಡಲಾಗುತ್ತಿದೆ. ಉಚಿತವಾಗಿ ನಿತ್ಯ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಕಲಿಸಲಾಗುವುದು ಎಂದು ತಿಳಿಸಿದ್ದಾರೆ.