ಬೆಟ್ಟದಪುರ: ಆರೋಗ್ಯ ಸೇವೆಯಲ್ಲಿ ಹಗಲಿರುಳು ಕಾರ್ಯನಿರ್ವಹಿಸುವ ದಾದಿಯರ ಕಾರ್ಯ ಶ್ಲಾಘನೀಯ ಎಂದು ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ ಅಭಿಪ್ರಾಯಪಟ್ಟರು.
ಬೆಟ್ಟದಪುರ ಆರೋಗ್ಯ ಕೇಂದ್ರದಲ್ಲಿ ಅಮೋಘವರ್ಷ ಅಮೃತವರ್ಷಿಣಿ ಸೇವಾ ಪ್ರತಿಷ್ಠಾನದಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗರ್ಭಿಣಿಯರು, ಮಕ್ಕಳು, ವೃದ್ಧರ ಸೇವೆಯನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತ ಕಾಯಕದಲ್ಲೇ ದೇವರನ್ನು ಕಾಣುವ, ರೋಗಿಗಳ ಅಂತರಂಗದಲ್ಲಿ ಚೈತನ್ಯ ತುಂಬಿಸುವ ದಿವ್ಯಶಕ್ತಿ ದಾದಿಯರಿಗಿದೆ. ಕೋವಿಡ್ ಸಂದರ್ಭದಲ್ಲಿ 150ಕ್ಕೂ ಹೆಚ್ಚು ದಾದಿಯರು ಕರೊನಾ ಪೀಡಿತರಿಗೆ ಸೇವೆ ಮಾಡುತ್ತ ತಮ್ಮ ಜೀವವನ್ನು ಕಳೆದುಕೊಂಡು ವೃತ್ತಿಯ ಸಾರ್ಥಕತೆ ಮೆರೆದರು. ದಾದಿ ಎಂಬ ವಿಶ್ವಮಾತೆಯರ ಕೈಗಳಲ್ಲಿ ಸಮಾಜ ಹಸನಾಗಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿ, ವಿಶ್ವಮಾತೆ ಪ್ಲಾರೆನ್ಸ್ ನೈಟಿಂಗೆಲ್ ಅವರ ಜನ್ಮದಿನವನ್ನು ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಕ್ರಿಮಿಯಾ ಯುದ್ಧದಲ್ಲಿ ಗಾಯಗೊಂಡ ಸೈನಿಕರು, ರಕ್ತಸಿಕ್ತ ಕೀವು ತುಂಬಿದ ದೇಹಗಳ ಶೂಶ್ರೂಷೆ ಮಾಡುತ್ತ ಸೇವೆಯಲ್ಲಿ ಸಾರ್ಥಕತೆ ಮೆರೆದ ಮಾತೃಹೃದಯಿ ಅವರ ಸೇವೆ ಅನುಕರಣೀಯ ಎಂದರು.
ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರಾದ ದೇವಕಿ, ಗೀತಾ, ಕುಸುಮಾ, ಸಂಗರಶೆಟ್ಟಹಳ್ಳಿ ಆರೋಗ್ಯ ಕೇಂದ್ರದ ಉಷಾ, ಭುವನಹಳ್ಳಿ ಆರೋಗ್ಯ ಕೇಂದ್ರದ ಶಶಿ, ಚಿಕ್ಕಹೊಸೂರು ಆಸ್ಪತ್ರೆಯ ಮಹೇಂದ್ರ, ಹಬಟೂರು ಆಸ್ಪತ್ರೆಯ ಗಿಡ್ಡೇಗೌಡ ಅವರನ್ನು ಸನ್ಮಾನಿಸಲಾಯಿತು.
ಸೆಸ್ಕ್ ನೌಕರ ಸುರೇಶ್, ಸಮಾಜ ಸೇವಕ ಮಲ್ಲೇಶ್, ಮಾಗಳಿ ರಾಮೇಗೌಡ ಹಾಗೂ ಸಿಬ್ಬಂದಿ ಇದ್ದರು.