ಚಿತ್ರದುರ್ಗ: ಒಳ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿ ಸೋರಿಕೆಯಾಗಿರುವ ಅಂಶ ಆತಂಕಕ್ಕೆ ಕಾರಣವಾಗಿದೆ ಎಂದು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಸ್ಪಶ್ಯ, ಅಸ್ಪಶ್ಯ ಎಂಬ ಶಬ್ಧಗಳ ಬಳಕೆ ತುಂಬಾ ನೋವಿನ ಸಂಗತಿ. ಸಮಾನ ಸಹೋದರ ಜಾತಿಗಳನ್ನು ಛಿದ್ರಗೊಳಿಸಿರುವುದು ಕಂಡು ಬಂದಿದೆ. ಆಯೋಗ ರಚನೆಯ ಮೂಲ ಉದ್ದೇಶವನ್ನು ಮರೆತಿರುವ ಅನುಮಾನವಿದೆ. ಹೀಗಾಗಿ ಏಕಪಕ್ಷೀಯವಾಗಿ ವರದಿ ಅಂಗೀಕರಿಸಬಾರದು ಎಂದು ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಿ.ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಸಮುದಾಯಗಳ ಆಕ್ಷೇಪಣೆ ಸ್ವೀಕರಿಸಲು 3 ತಿಂಗಳ ಅವಕಾಶ ನೀಡಬೇಕು. ಜನಸಂಖ್ಯೆವಾರು ಮೀಸಲಾತಿ ನಿಗದಿಯಾಗಬೇಕು. ಪರಿಶಿಷ್ಟರ ಐಕ್ಯತೆ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.
2011ಕ್ಕೂ, 2025ಕ್ಕೂ ಹೋಲಿಸಿದಲ್ಲಿ ಪರಿಶಿಷ್ಟರ ಸಂಖ್ಯೆ 1.25 ಕೋಟಿಗೂ ಹೆಚ್ಚಿರಬೇಕು. ಆದರೆ, ಆಯೋಗ 1.07 ಕೋಟಿ ಜನರ ಸಮೀಕ್ಷೆ ನಡೆಸಿದ್ದು, ಇದು ನಿಖರವಾಗಿ ಆಗಿಲ್ಲ. ಹೀಗಾಗಿ ವಿಶೇಷ ಅಧಿವೇಶನ ಕರೆದು, 224 ಶಾಸಕರು ಹಾಗೂ ಎಂಎಲ್ಸಿಗಳ ಪ್ರತ್ಯೇಕ ಅಭಿಪ್ರಾಯ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯ ಶಕ್ತಿ ತುಂಬಿದೆ. ಅದಕ್ಕಾಗಿ ಈ ಸಮಾಜಗಳ ಶಕ್ತಿ ಕುಂದಿಸುವ ಕಾರ್ಯ ಸರ್ಕಾರ ಮಾಡಬಾರದು. ಶೇ 4ರಷ್ಟು ನೀಡಿದರೆ, ಅನ್ಯಾಯವಾಗಲಿದೆ. ಹಿಂದುಳಿದಿರುವಿಕೆ ಆಧಾರದ ಮೇಲೆ ಶೇಕಡಾವಾರು ಹೆಚ್ಚಿಸಬೇಕು. ವೈಜ್ಞಾನಿಕವಾಗಿ ಒಳಮೀಸಲಾತಿಯಲ್ಲಿ 101 ಜಾತಿಗಳಿಗೂ ಅನ್ಯಾಯವಾಗದಂತೆ ಎಚ್ಚರವಹಿಸಬೇಕು ಎಂದು ಕೋರಿದ್ದಾರೆ.