ಮಂಗಳೂರು: ಶುಕ್ರವಾರ ಕ್ಷಿಪ್ರ ದಾಳಿ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ, ಕೆಪಿಎಂಇಎ ನಿಯಮ ಉಲ್ಲಂಘಿಸಿ ಚಿಕಿತ್ಸೆ ನೀಡಿದ ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ಬೀಗ ಜಡಿದಿದೆ.
ಮಾಧವ ಅವರ ಪತ್ನಿ ಅಪ್ಪಿ ಎಂಬುವರು ಈ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಕೋವಿಡ್ ಪರೀಕ್ಷೆ ನಡೆಸದೆ ನಿರ್ಲಕ್ಷೃ ವಹಿಸಿ ರೋಗಿಗೆ ಚಿಕಿತ್ಸೆ ನೀಡಲಾಗಿದೆ ಎಂಬ ಆರೋಪಿದೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಕಿಯರು ಕೂಡ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ಮಾನ್ಯತೆ ಪಡೆಯದೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ದಾಖಲೆ ದೊರೆತಿದೆ. ಇಲ್ಲಿನ ಆಯುರ್ವೇದ ವೈದ್ಯರು ಅಲೋಪಥಿ ಚಿಕಿತ್ಸೆ ನೀಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.
ಕಾರ್ಯಾಚರಣೆ ಸಂದರ್ಭ ಆಸ್ಪತ್ರೆಯಲ್ಲಿ 18 ರೋಗಿಗಳು ದಾಖಲಾಗಿದ್ದು, ಕೇಸ್‌ಶೀಟ್ ಪರಿಶೀಲಿಸಿದಾಗ 9 ಮಂದಿಯನ್ನು ಮಾತ್ರ ಅಧಿಕೃತವಾಗಿ ದಾಖಲಿಸಲಾಗಿತ್ತು. ಉಳಿದ ನಾಲ್ಕು ಮಂದಿಯಲ್ಲಿ ಜ್ವರದ ಲಕ್ಷಣಗಳು ಇದ್ದು, ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಕೆಪಿಎಂಇಎ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿದು ಆಸ್ಪತ್ರೆ ಮುಚ್ಚಲಾಗಿದೆ.