ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತದ ಸೇನೆ ನಡೆಸಿದ ದಾಳಿಗೆ ಮೈಸೂರಿನಲ್ಲಿ ಸಾರ್ವಜನಿಕರು, ಹಿಂದುಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು, ವಿವಿಧ ಸಂಘ,ಸಂಸ್ತೆಗಳು ವಿವಿಧೆಡೆ ಬುಧವಾರ ಸಂಭ್ರಮಾಚರಣೆ ನಡೆಸಿದವು.
ಯುವ ಭಾರತ್ ಸಂಘಟನೆ ವತಿಯಿಂದ ನಗರದ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ತ್ರಿವರ್ಣ ಧ್ವಜವನ್ನು ಹಿಡಿದು ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ ಎಂಬ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಯುವ ಭಾರತ್ ಸಂಘಟನೆಯ ಜೋಗಿ ಮಂಜು, ವಿಕ್ರಂ ಅಯ್ಯಂಗಾರ್, ಪ್ರಕಾಶ್ ಪ್ರಿಯದರ್ಶನ್ ಮತ್ತಿತರರು ಪಾಲ್ಗೊಂಡಿದ್ದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ ಎಂಬ ಜೈಕಾರ ಹಾಕುತ್ತಲೇ ಬೆಳೆದಿದ್ದಾರೆ. ಮೋದಿ ಅವರು ಕೇವಲ ಬಾಯಿ ಮಾತಿಗೆ ಈ ಜಯಘೋಷ ಹಾಕಲಿಲ್ಲ. ಬದಲಾಗಿ ಆಪರೇಷನ್ ಸಿಂಧೂರ ನಡೆಸುವ ಮೂಲಕ ಅದನ್ನು ನಿಜ ಮಾಡಿದ್ದಾರೆ. ನ್ಯೂಕ್ಲಿಯರ್ ಟೆಸ್ಟ್ ಮಾಡಿದ ವಾಜಪೇಯಿ ನಮ್ಮ ಹೆಮ್ಮೆಯಾಗಿದ್ದು, ಈಗ ಮೋದಿ ಅವರು ಕೂಡ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.