ನ್ಯೂಸ್

ಆನೆಗಳ ತಾಣ ತೆಂಗಿನಕಲ್ಲು ಅರಣ್ಯ : ಹಿಂಡು ಹಿಂಡಾಗಿ ಬಂದು ಸೇರುತ್ತಿರುವ ಗಜಪಡೆ, ಭಯದಲ್ಲಿ ರೈತರು

ಕೈಲಾಂಚ : ಹೋಬಳಿಯ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಇತ್ತೀಚಿನ ದಿನಗಳಲ್ಲಿ ಆನೆಗಳು ತಂಡ ತಂಡವಾಗಿ ಬಂದು ಸೇರುತ್ತಿದ್ದು ಅರಣ್ಯ ಇಲಾಖೆಗೆ ತಲೆಬಿಸಿ ತರಿಸಿದ್ದರೆ, ಸುತ್ತಮುತ್ತಲ ಗ್ರಾಮಗಳ ಜನರು ಆನೆಗಳ ಉಪಟಳದಿಂದಾಗಿ ಭಯಭೀತರಾಗಿದ್ದಾರೆ.

ತೆಂಗಿನಕಲ್ಲು ಅರಣ್ಯ ಪ್ರದೇಶ 10,109 ಎಕರೆ ವಿಸ್ತಾರ ಹೊಂದಿದೆ.

ಚನ್ನಪಟ್ಟಣ, ಕನಕಪುರ ಗಡಿ ಪ್ರದೇಶದ ಈ ಅರಣ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆದಿದ್ದು, ಜತೆಗೆ ಅಮೂಲ್ಯ ವೃಕ್ಷ ಸಂಪತ್ತನ್ನು ಹೊಂದಿದೆ. ಜಿಂಕೆ, ಕರಡಿ, ನವಿಲು, ಕೊಂಡಕುರಿ, ಚಿರತೆ, ಮೊಲ, ನರಿ, ಮುಳ್ಳುಹಂದಿ, ಕಾಡು ಹಂದಿ ಮುಂತಾದ ವನ್ಯಜೀವಿಗಳು ಇಲ್ಲಿವೆ.

ಇತ್ತೀಚಿನ ದಿನಗಳಲ್ಲಿ ತೆಂಗಿನಕಲ್ಲು ಅರಣ್ಯ ಅನೆಗಳ ನೆಚ್ಚಿನ ತಾಣವಾಗುತ್ತಿದೆ.

ಹಲವು ವರ್ಷಗಳ ಹಿಂದೆ ಅಪರೂಪಕ್ಕೊಮ್ಮೆ ಎನ್ನುವಂತೆ ಒಂದೆರಡು ಆನೆಗಳು ಕಾಣಿಸಿಕೊಂಡು ಮೂಲ ಸ್ಥಾನ ಸೇರಿಕೊಳ್ಳುತ್ತಿದವು. ಆದರೆ ಈಗ ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತಿದ್ದು, ತೆಂಗಿನಕಲ್ಲು ಅರಣ್ಯವನ್ನೇ ವಾಸಸ್ಥಾನ ಮಾಡಿಕೊಳ್ಳಲು ಹೊರಟಂತಿದೆ.

ಮೂವತ್ತಕ್ಕೂ ಹೆಚ್ಚು ಆನೆಗಳು: ಇತ್ತೀಚಿನ ದಿನಗಳಲ್ಲಿ ವಾರಕ್ಕೊಮ್ಮೆ ಅರಣ್ಯಕ್ಕೆ ಲಗ್ಗೆ ಇಡುತ್ತಿರುವ ಆನೆಗಳು ಅರಣ್ಯ ಇಲಾಖೆ ನಿದ್ದೆಗೆಡಿಸಿವೆ. ಆನೆಗಳ ಉಪಟಳ ಮತ್ತು ಅರಣ್ಯ ಸೇರುತ್ತಿರುವ ಆನೆಗಳ ಲೆಕ್ಕ ಸಿಗದಂತಾಗಿದೆ. 15 ದಿನಗಳಿಂದ 12 ಆನೆಗಳ ಹಿಂಡು, 3 ಆನೆಗಳ ಎರಡು ಹಿಂಡು, 4 ಆನೆಗಳಿರುವ 2 ಗುಂಪು, 2 ಆನೆಗಳ ಒಂದು ತಂಡ ಜತೆಗೆ ಒಂಟಿ ಆನೆ ಹೀಗೆ ಮೂವತ್ತಕ್ಕೂ ಹೆಚ್ಚಿನ ಆನೆಗಳು ಅರಣ್ಯದಲ್ಲಿ ಬೀಡು ಬಿಟ್ಟಿವೆ.

ಅವುಗಳನ್ನು ಸ್ವಸ್ಥಾನಕ್ಕೆ ಸೇರಿಸಲು ಕಾರ್ಯಾಚರಣೆ ಕೈಗೊಂಡರೂ ಸಲವಾಗದಿರುವುದು ಅರಣ್ಯ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿ ಸುತ್ತಮುತ್ತಲ ಜನರ ನಿದ್ದೆಗೆಡಿಸಿವೆ.

ರೈತರು ಹೈರಾಣ: ಆನೆಗಳು ತೆಂಗಿನಕಲ್ಲು ಅರಣ್ಯ ಸೇರುವ ಮಾರ್ಗಮಧ್ಯ ಇರುವ ಕಾಡನಕುಪ್ಪೆ, ತೆಂಗಿನಕಲ್ಲು, ಹೊಸದೊಡ್ಡಿ, ನಂಜಾಪುರ, ಲಕ್ಕೋಜನಹಳ್ಳಿ, ಕವಣಾಪುರ, ನೆಲಮಲೆ, ಕೆ.ಜಿ. ಹೊಸಹಳ್ಳಿ, ಕುರುಬಳ್ಳಿದೊಡ್ಡಿ, ಸಬ್ಬಕೆರೆ ಮುಂತಾದ ಗ್ರಾಮಗಳ ಜಮೀನಿನ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ನಷ್ಟ ಉಂಟು ಮಾಡುತ್ತಿವೆ. ಜತೆಗೆ ತೆಂಗು, ಮಾವಿನ ಮರಗಳು ಆನೆ ದಾಳಿಗೆ ತುತ್ತಾಗಿ ರೈತರ ಆದಾಯಕ್ಕೂ ಕತ್ತರಿ ಬೀಳುತ್ತಿದ್ದು, ರೈತರು ಹೈರಾಣಾಗಿದ್ದಾರೆ.

ತೆಂಗಿನಕಲ್ಲು ಅರಣ್ಯಕ್ಕೇ ಏಕೆ?: ಕಾವೇರಿ ವನ್ಯಜೀವಿಧಾಮದಲ್ಲಿ ಮೇವು, ನೀರಿನ ಕೊರತೆ ಇದ್ದು, ಆಹಾರ, ನೀರು ಅರಸಿ ಹೊರಬರುವ ಆನೆಗಳು ಬಿದಿರಿನ ಆಸೆಗಾಗಿ ತೆಂಗಿನಕಲ್ಲು ಅರಣ್ಯದತ್ತ ಮುಖ ಮಾಡುತ್ತಿವೆ. ಕಾವೇರಿ ವನ್ಯಜೀವಿಧಾಮದ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವುದೂ ಮತ್ತೊಂದು ಕಾರಣ ಎನ್ನಲಾಗಿದೆ.

ತೆಂಗಿನಕಲ್ಲು ಅರಣ್ಯ ಸೇರುವ ಆನೆಗಳನ್ನು ತಕ್ಷಣವೇ ಸ್ವಸ್ಥಾನ ಸೇರಿಸುವ ಕಾರ್ಯ ನಿರಂತರವಾಗಿ ಸಾಗಿದೆ. ಸ್ವಸ್ಥಾನ ಸೇರಿದ ನಂತರವೂ ಆನೆಗಳು ವಾಪಸ್ ಬರುತ್ತಿರುವುದು ಇಲಾಖೆಗೆ ಸವಾಲಾಗಿದೆ. ಕಳೆದ ಹದಿನೈದು ದಿನಗಳಿಂದ ಬಂದ ಆನೆಗಳ ಹಿಂಡಿನ ಸಂಖ್ಯೆ 28 ದಾಟಿತ್ತು. ಕಳೆದ ರಾತ್ರಿ 12 ಮತ್ತು 4 ಆನೆಗಳ ಗುಂಪನ್ನು ಮೂಲ ಸ್ಥಾನಕ್ಕೆ ಅಟ್ಟಲಾಗಿದೆ. 4 ಆನೆಗಳು ತೆಂಗಿನಕಲ್ಲು ಅರಣ್ಯದಲ್ಲಿದ್ದು ಹಂದಿಗೊಂದಿ ಅರಣ್ಯದ ಕಡೆ 6 ಆನೆಗಳು ಹೋಗಿವೆ. ಆನೆಗಳ ಚಲನವಲನದ ಬಗ್ಗೆ ಇಲಾಖೆ ಸತತ ನಿಗಾ ಇರಿಸಿದ್ದು, ಉಳಿದ ಆನೆಗಳನ್ನು ಅವುಗಳ ಮೂಲಸ್ಥಾನಕ್ಕೆ ಸೇರಿಸಲಾಗುವುದು. ಮಹಮ್ಮದ್ ಮನ್ಸೂರ್, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ ಅಪರೂಪಕ್ಕೊಮ್ಮೆ ಆನೆಗಳು ಬಂದಿರುವ ಸುದ್ದಿ ಕೇಳುತ್ತಿದ್ದ ನಮಗೆ ಈಗ ಹಿಂಡು ಆನೆಗಳು ತೆಂಗಿನಕಲ್ಲು ಅರಣ್ಯ ಸೇರುತ್ತಿರುವುದು ಆತಂಕ ಹೆಚ್ಚಿಸಿದೆ. ಆನೆಗಳ ಉಪಟಳ ಹೆಚ್ಚಾಗಿ ಕೃಷಿ ಚಟುವಟಿಕೆಗೆ ಸಂಕಷ್ಟ ಎದುರಾಗುವುದರ ಜತೆಗೆ ಆನೆಗಳ ಭಯದಲ್ಲೇ ಜನರು ಕಾಲಕಳೆಯಬೇಕಾದ ಸನ್ನಿವೇಶ ಎದುರಾಗಬಹುದು. ರಾಘವೇಂದ್ರ ಕಾಡನಕುಪ್ಪೆ