ನ್ಯೂಸ್

ಆನೆಕಾಲು ರೋಗ ಪತ್ತೆ ಶಿಬಿರ

ಬೆಟ್ಟದಪುರ: ಸಮೀಪದ ಚಪ್ಪರದಹಳ್ಳಿ ಗ್ರಾಮದ ಶ್ರೀ ಕೊಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ರಾತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆನೆಕಾಲು ರೋಗ ಪತ್ತೆ ಹಿನ್ನೆಲೆಯಲ್ಲಿ ಮಾದರಿ ರಕ್ತ ಲೇಪನ ಸಂಗ್ರಹ ಶಿಬಿರ ಆಯೋಜಿಸಲಾಗಿತ್ತು.

ಕೇಂದ್ರದ ವೈದ್ಯಾಧಿಕಾರಿ ಡಾ.ಆರ್.ಸಂದೀಪ್ ಮಾತನಾಡಿ, ಆನೆ ಕಾಲು ರೋಗ ಪರಾವಲಂಬಿ ರೋಗ. ಕ್ಯುಲೆಕ್ಸ್ ಜಾತಿಯ ಸೊಳ್ಳೆಯು ರಾತ್ರಿ ಸಮಯದಲ್ಲಿ ಕಚ್ಚುವುದರಿಂದ ಬರಲಿದೆ. ತಾಲೂಕಿವ ವಿವಿಧೆಡೆ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮಗಳಿಗೆ ರಾತ್ರಿ ಸಂದರ್ಭದಲ್ಲಿ ಭೇಟಿ ನೀಡಿ ಮಾದರಿ ರಕ್ತ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ರಾತ್ರಿ ಸಂದರ್ಭದಲ್ಲಿ ಸಂಗ್ರಹಿಸಿದ ಮಾದರಿ ರಕ್ತದಿಂದ ರೋಗಯವನ್ನು ಪತ್ತೆ ಹಚ್ಚಬಹುದಾಗಿದೆ.

ಜನರು ಯಾವುದೇ ಆತಂಕಕ್ಕೆ ಒಳಗಾಗದೆ ಕಾಳಜಿ ವಹಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಶಿಬಿರದಲ್ಲಿ ಗ್ರಾಮದ ಸುಮಾರು 102 ಜನರ ಮಾದರಿ ರಕ್ತ ಲೇಪನವನ್ನು ಸಿಬ್ಬಂದಿ ಸಂಗ್ರಹಿಸಿದರು. ಪ್ರಯೋಗಶಾಲಾ ತಂತ್ರಜ್ಞ ಪಿ.ಎನ್.ರವಿಕುಮಾರ್, ಆರೋಗ್ಯ ನಿರೀಕ್ಷಕ ರವಿ, ಸಿಎಚ್‌ಒ ರಚನಾ, ಆಶಾ ಕಾರ್ಯಕರ್ತೆಯರಾದ ಪುಟ್ಟಲಕ್ಷ್ಮೀ, ಜಯಂತಿ, ಲೀಲಾವತಿ ಇತರರು ಇದ್ದರು.