ಬಾಳೆಹೊನ್ನೂರು ಸಮೀಪದ ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಕುಳುವಾಡಿ ಕಾಲನಿಯಲ್ಲಿ ಕಾಡಾನೆ ತುಳಿದು ಹಾನಿ ಮಾಡಿರುವ ಭತ್ತದ ಗದ್ದೆಯನ್ನು ಪರಿಶೀಲಿಸುತ್ತಿರುವ ರೈತರು. 
ನ್ಯೂಸ್

ಆನೆ ಹಾವಳಿಗೆ ಅಪಾರ ಬೆಳೆ ಹಾನಿ

ಬಾಳೆಹೊನ್ನೂರು: ಸಮೀಪದ ಖಾಂಡ್ಯ ಹೋಬಳಿಯ ಹುಯಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳುವಾಡಿ ಕಾಲನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಸಲಿಗೆ ಬಂದಿದ್ದ ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ ನಡೆಸಿದ್ದು ಅಪಾರ ಹಾನಿಯಾಗಿದೆ.

ಈ ಭಾಗದ ಹಲವು ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಿತ್ಯವೂ ರೈತರ ತೋಟ, ಜಮೀನುಗಳಿಗೆ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿವೆ. ಸಲಿಗೆ ಬಂದ ಅಡಕೆ, ಕಾಫಿ, ತೆಂಗು, ಬಾಳೆ, ಭತ್ತ ಮುಂತಾದವುಗಳನ್ನು ಹಾನಿ ಮಾಡುತ್ತಿವೆ. ಇದರಿಂದ ರೈತರ ಜೀವನ ತೀವ್ರ ಸಂಕಷ್ಟದಲ್ಲಿದ್ದು ಅರಣ್ಯ ಇಲಾಖೆ ರೈತರಿಗೆ ಪರಿಹಾರ ನೀಡುವುದರ ಜತೆಗೆ ಕಾಡಾನೆಗಳನ್ನು ಬೇರೆಡೆಗೆ ಓಡಿಸಬೇಕು ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸದಸ್ಯ ನವೀನ್ ಕರಗಣೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಬೆಳೆ ಪರಿಹಾರ ನೀಡುವ ಭರವಸೆ ನೀಡಿದರು.