ಎನ್.ಆರ್.ಪುರ: ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಆನೆ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರ ಒದಗಿಸಲು ಮನವಿ ಮಾಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಕೆರೆಗದ್ದೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟ ಉಮೇಶ್ ಅವರ ಕುಟುಂಬಕ್ಕೆ ಬುಧವಾರ ಸೀತೂರು ಗ್ರಾಮ ಅರಣ್ಯ ಸಮಿತಿಯಿಂದ 5 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಾಶ್ವತವಾಗಿ ಆನೆ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಆನೆ ತಡೆ ಕಂದಕದಿಂದ ಹಾಗೂ ಟೆಂಟಕಲ್ ೆನ್ಸಿಂಗ್‌ನಿಂದ ಆನೆ ಹಾವಳಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಿಭಾಗೀಯ ಮಟ್ಟದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಿ ಆನೆಗಳ ಚಲನವಲನಗಳ ಮಾಹಿತಿ ನೀಡಲಾಗುವುದು ಎಂದರು.
ಕೃಷಿಕನನ್ನು ಸಾಯಿಸಿದ ಆನೆ ಪತ್ತೆ ಹಚ್ಚುವ ಕಾರ್ಯಾಚರಣೆ ಮುಂದುವರಿದಿದ್ದು, ಇದು ಪತ್ತೆಯಾದ ಕೂಡಲೇ ಸ್ಥಳಾಂತರಿಸಲಾಗುವುದು. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ನೀಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದರು.
ಆನೆ, ಕಾಡುಕೋಣ, ಹಂದಿ ಇತರ ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾಗಿದ್ದಕ್ಕೆ ತುರ್ತಾಗಿ ಪರಿಹಾರ ನೀಡಲಾಗುತ್ತಿದೆ. ಹಿಂದೆ ಕಾಡು ಪ್ರಾಣಿಗಳ ದಾಳಿಯಿಂದ ಮಾನವ ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪರಿಹಾರದ ಮೊತ್ತವನ್ನು 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಆನೆ ದಾಳಿಯಿಂದ ಮೃತಪಟ್ಟ ಉಮೇಶ್ ಅವರ ಕುಟುಂಬಕ್ಕೆ ಸರ್ಕಾರದೊಂದಿಗೆ ಚರ್ಚಿಸಿ ಮಾನವೀಯತೆಯಿಂದ ಹೆಚ್ಚಿನ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗಿದೆ. ಮೃತರ ಪುತ್ರನಿಗೆ ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕ ಹುದ್ದೆ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಎನ್.ಆರ್.ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್, ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ, ಸೀತೂರು ಗ್ರಾಪಂ ಸದಸ್ಯ ರಮೇಶ್, ಮುಖಂಡರಾದ ಎಂ.ಆರ್.ರವಿಶಂಕರ್, ಬಿ.ಪಿ.ರವಿ ಇತರರಿದ್ದರು.