ಮೂಡಿಗೆರೆಯಲ್ಲಿ ಯುವಜನಮೇಳ ಕಾರ್ಯಕ್ರಮವನ್ನು ಮಾಜಿ ಸಚಿವೆ ಮೋಟಮ್ಮ ಉದ್ಘಾಟಿಸಿದರು. ಎಂ.ಎಸ್.ಆನಂದ, ಬಿ.ಬಿ.ನಿಂಗಯ್ಯ, ರಾಜಶೇಖರಮೂರ್ತಿ, ರಂಜನ್ ಅಜಿತ್‌ಕುಮಾರ್, ನಿರ್ಮಲಾ, ಎಂ.ಎಸ್.ಅನಂತ್, ಬಕ್ಕಿ ಮಂಜು, ಜಿ.ಬಿ.ಸುರೇಶ್, ಜಯಪಾಲ್, ಕೆ.ಸಿ.ಚಂದ್ರಶೇಖರ್ ಇತರರಿದ್ದರು. 
ನ್ಯೂಸ್

ಆಧುನಿಕ ಜೀವನಶೈಲಿಯಿಂದ ಜಾನಪದ ನೇಪಥ್ಯಕ್ಕೆ

ಮೂಡಿಗೆರೆ: ಗ್ರಾಮೀಣ ಭಾಗದ ಜನರ ಜೀವನ ಜಾನಪದ ಶೈಲಿಗೆ ಹೊಂದಿಕೊಳ್ಳುತ್ತದೆ. ಈಗಿನ ಆಧುನಿಕ ಭರಾಟೆಗೆ ಸಿಲುಕಿರುವ ನಾಗರಿಕ ವ್ಯವಸ್ಥೆ ಮೊಬೈಲ್ ಮತ್ತು ಟಿವಿ ಮೊರೆ ಹೋಗಿರುವ ಕಾರಣ ಜಾನಪದ ಕಲಾಶೈಲಿ ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಮಾಜಿ ಸಚಿವೆ ಮೋಟಮ್ಮ ಕಳವಳ ವ್ಯಕ್ತಪಡಿಸಿದರು.

ಮಿತ್ರ ಜಾನಪದ ಕಲಾಸಂಘದಿಂದ ಅಡ್ಯಂತಾಯ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆಯುವ ಕೋಲಾಟ, ಗೀಗೀಪದ, ಸೋಭಾನೆಪದ, ಜಾನಪದ ಪ್ರಕಾರಗಳು ಹೆಚ್ಚಾಗಿದ್ದ ಕಾಲದಲ್ಲಿ ಒನಕೆಯಿಂದ ಭತ್ತವನ್ನು ಕುಟ್ಟಿ, ಅಕ್ಕಿ ಮಾಡಿ ಸೌದೆ ಒಲೆ ಮೂಲಕ ಮಣ್ಣಿನ ಮಡಕೆಯಲ್ಲಿ ಅಡುಗೆ ಮಾಡುತ್ತಿದ್ದ ಶೈಲಿಯನ್ನು ಜಾನಪದ ಪ್ರಕಾರಗಳಿಗೆ ಹೋಲಿಕೆ ಮಾಡಲಾಗಿದೆ ಎಂದರು.

ಅಂದಿನ ಜಾನಪದ ಶೈಲಿಯಿಂದ ಜನರ ಆರೋಗ್ಯ ಕೆಡುತ್ತಿರಲಿಲ್ಲ. 100 ವರ್ಷ ಬದುಕಿದವರೂ ಆಸ್ಪತ್ರೆ ಮೆಟ್ಟಿಲು ಹತ್ತಿರಲಿಲ್ಲ. ಇದು ಜಾನಪದ ಕಲಾ ಪ್ರಕಾರಗಳಿಗಿರುವ ಶಕ್ತಿ. ಹಿಂದೆ ಗ್ರಾಮೀಣ ಜನರ ಪ್ರತಿಯೊಂದು ಜೀವನಶೈಲಿಯೂ ಜಾನಪದ ಕಲಾ ಪ್ರಕಾರಗಳಿಗೆ ಹೊಂದಾಣಿಕೆಯಾಗುತ್ತಿತ್ತು. ನನ್ನ ಕುಟುಂಬ ಕೂಡ ಜಾನಪದ ಶೈಲಿಯಲ್ಲಿ ಬೆಳೆದು ಬಂದಿದೆ. ನನ್ನ ತಂದೆ, ತಾಯಿ ಜಾನಪದ ಕಲಾಪ್ರಕಾರಗಳನ್ನು ಮೈಗೂಡಿಸಿಕೊಂಡಿದ್ದರು. ಬದುಕಿನ ಕಷ್ಟ-ಸುಖದಲ್ಲಿ ಜಾನಪದವನ್ನು ಬಿಟ್ಟು ನಾವು ಹೊರಹೋಗಿಲ್ಲ ಎಂದು ಹೇಳಿದರು.

ಭಾರತೀಯ ಪರಂಪರೆ ಮತ್ತು ಸಂಸ್ಕೃತಿಗೆ ಹೊಂದಾಣಿಕೆಯಾಗುವ ಜಾನಪದ ಶೈಲಿಯನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲ. ಕುಂಭಮೇಳಕ್ಕೆ ಮಲೆನಾಡಿನಿಂದ ಸಾವಿರಾರು ಸಂಖ್ಯೆಯಲ್ಲಿ ಹೋಗಿ ಮಿಂದು ಬಂದಿದ್ದಾರೆ. ಆದರೆ ನಮ್ಮ ತಾಲೂಕಿನ ಆಲೂರು ಗ್ರಾಮದಲ್ಲಿರುವ ಹೇಮಾವತಿ ಮತ್ತು ಸೋಮಾವತಿ ನದಿ ಸಂಗಮವಾಗುವ ಸ್ಥಳಕ್ಕೆ ಕೂಡಿಗೆ ಎಂದು ಹೆಸರಿಡಲಾಗಿದೆ. ಅಲ್ಲಿ ದೇವಸ್ಥಾನವಿದೆ. ಆ ಸ್ಥಳದಲ್ಲಿ ಮಿಂದು ಬಂದರೆ ಸಕಲ ಪಾಪಗಳೆಲ್ಲ ಆ ನದಿಯಲ್ಲಿ ಕೊಚ್ಚಿ ಹೋಗುತ್ತವೆ ಎಂಬ ಪ್ರತೀತಿಯಿದೆ. ಮದುವೆಯಾದ ನವಜೋಡಿಗಳು ಕೂಡಿಗೆಗೆ ಕುಟುಂಬ ಸಮೇತ ತೆರಳಿ ದೃಷ್ಟಿ ತೆಗೆಸಿ ಪೂಜೆ ಸಲ್ಲಿಸಿ ಬಂದಾಗ ಅವರು ಜೀವನದಲ್ಲಿ ಆದರ್ಶ ದಂಪತಿಗಳಾಗಿ ಬಾಳಲಿದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ತಾಲೂಕಿನಿಂದ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಮಿತ್ರ ಜಾನಪದ ಕಲಾಸಂಘದ ಅಧ್ಯಕ್ಷ ಎಂ.ಎಸ್.ಆನಂದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ರಾಜಶೇಖರಮೂರ್ತಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಜಿ.ಬಿ.ಸುರೇಶ್, ಜಿಲ್ಲಾ ಕೆಡಿಪಿ ಸದಸ್ಯ ಸುಧೀರ್ ಚಕ್ರಮಣಿ, ಮುಖಂಡರಾದ ನಿರ್ಮಲಾ ಮಂಚೇಗೌಡ, ಎಂ.ಎಸ್.ಅನಂತ್, ಬಕ್ಕಿ ಮಂಜು, ಜಯಪಾಲ್, ಮಹೇಂದ್ರ ಮೌರ್ಯ, ಕೆ.ಸಿ.ಚಂದ್ರಶೇಖರ್, ಬಕ್ಕಿ ರವೀಂದ್ರ, ಸುಬ್ರಹ್ಮಣ್ಯ ಇತರರಿದ್ದರು.