ನ್ಯೂಸ್

ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಡೀಡ್ ಕೊಡುಗೆ ಅಪಾರ

ಹುಣಸೂರು: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರೇತರ ಸಂಘ,ಸಂಸ್ಥೆಗಳು ನಿಸ್ವಾರ್ಥದಿಂದ ದುಡಿಯಬೇಕಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.


ಭಾನುವಾರ ನಗರದ ಡೀಡ್ ಸಂಸ್ಥೆಯ ಆವರಣದಲ್ಲಿ ಡೀಡ್ ಸಂಸ್ಥೆಯ 44ನೇ ವರ್ಷ ಸೇವಾ ಕಾರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಸರ್ವ ಜನರ ಕಲ್ಯಾಣಕ್ಕಾಗಿ ದುಡಿಯತ್ತದೆ. ಈ ನಡುವೆ ಸರ್ಕಾರೇತರ ಸಂಘಸಂಸ್ಥೆಗಳು ಸರ್ಕಾರ ಇಟ್ಟ ತಪ್ಪು ಹೆಜ್ಜೆಗಳನ್ನು ಗುರುತಿಸುವುದಲ್ಲದೇ ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮದೇ ರೀತಿಯ ಕೊಡುಗೆಯನ್ನು ನೀಡುತ್ತಿರುತ್ತವೆ. ಈ ದಿಶೆಯಲ್ಲಿ ಡೀಡ್ ಸಂಸ್ಥೆ ಈ ನೆಲದ ಮೂಲನಿವಾಸಿಗಳೆಂದು ಗುರುತಿಸಲ್ಪಡುವ ಆದಿವಾಸಿಗಳ ಶ್ರೇಯೋಭಿವೃದ್ದಿಗಾಗಿ 4 ದಶಕಗಳಿಂದ ದುಡಿಯುತ್ತಿದೆ ಎನ್ನುವುದು ಶ್ಲಾಘನೀಯ. ಆಳುವವರನ್ನು ಎಚ್ಚರಿಸುವುದರೊಂದಿಗೆ ಆದಿವಾಸಿಗಳ ಕಲ್ಯಾಣಕ್ಕಾಗಿ ತನ್ನದೇ ರೀತಿಯ ಕೊಡುಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದರು.


ಡೀಡ್ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ಶ್ರೀಕಾಂತ್ ಪ್ರಾಸ್ತಾವಿಕ ನುಡಿಗಳನ್ನಾಡಿ, ವನ್ಯಜೀವಿ ಕಾಯ್ದೆ ಜಾರಿಯಿಂದಾಗಿ ಕಾಡಿನಿಂದ ಹೊರಹಾಕಲ್ಪಟ್ಟ ಅರಣ್ಯವಾಸಿಗಳಿಗೆ 80ರ ದಶಕದಲ್ಲಿ ಸರ್ಕಾರಿ ಸೇವೆಗಳು ತಲುಪಿಸುವ ಕಾರ್ಯ ಮಾಡುವ ಮೂಲಕ ಡೀಡ್ ತನ್ನ ಸೇವಾ ಕಾರ್ಯ ಆರಂಭಗೊಳಿಸಿತು. ನಂತರದ ವರ್ಷಗಳಲ್ಲಿ ಆದಿವಾಸಿಗಳ ಹಕ್ಕು ಪ್ರತಿಪಾದನೆ, ನಾಯಕತ್ವ ತರಬೇತಿ, ಅರಣ್ಯ ಹಾಗೂ ಪುನರ್ವಸತಿ ಹಕ್ಕು, ಭೂಮಿ ಹಕ್ಕು, ಒಳಮೀಸಲಾತಿ, ಗುಣಮಟ್ಟದ ಶಿಕ್ಷಣ ಒದಗಿಸಲು ಇಂದಿಗೂ ದುಡಿಯುತ್ತಿದೆ ಎಂದರು.


ಈ ವೇಳೆ ಬಿರ್ಸಾಮುಂಡ ಸೌಹಾರ್ದ ಸಹಕಾರ ಸಂಘದ ಪದಾಧಿಕಾರಿಗಳು ತಮ್ಮ ಸಂಘಕ್ಕೆ 25 ಲಕ್ಷ ರೂ.ಗಳ ಬಡ್ಡಿರಹಿತ ಸಾಲವನ್ನು ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ನೀಡುವ ಮೂಲಕ ಆರ್ಥಿಕಾಭಿವೃದ್ಧಿಗೆ ಬುನಾದಿ ಹಾಕಿಕೊಡಬೇಕೆಂದು ಕೋರಿದರು.


ಬುಡಕಟ್ಟು ಕೃಷಿಕರ ಸಂಘ, ದಲಿತ ಚಳವಳಿ ನವನಿರ್ಮಾಣ ವೇದಿಕೆ ಮುಂತಾದ ಸಂಘಟನೆಗಳು ನೀಡಿದ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸ್ವೀಕರಿಸಿದ ಶಾಸಕ ಹರೀಶ್‌ಗೌಡ ಆದಿವಾಸಿಗಳ ಸಮಸ್ಯೆ ಪರಿಹಾರಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸಂಬಂಧಪಟ್ಟ ಇಲಾಖೆಗಳ ಸಭೆ ನಡೆಸಲಿದ್ದೇನೆ. ಇದಕ್ಕಾಗಿ ಗಜಪಯಣಕ್ಕೆ ಚಾಲನೆ ನೀಡಲು ಬಂದಿದ್ದ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ ಎಂದರು.


ಗುರುಪುರ ಟಿಬೇಟಿಯನ್ ನಿರಾಶ್ರಿತರ ಕ್ಯಾಂಪಿನ ಮಹಿಳೆಯರು ಶಾಸಕರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಸಭೆಯಲ್ಲಿ ಮುಖಂಡರಾದ ಪಿ.ಕೆ.ರಾಮು, ಹರಿಹರ ಆನಂದಸ್ವಾಮಿ, ಹರ್ಷ, ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ, ಮೋದೂರು ಮಹೇಶಾರಾಧ್ಯ, ಮಂಜುನಾಥ್, ಶ್ರೀನಿವಾಸ್, ಪ್ರಕಾಶ್, ಶಿವಣ್ಣ, ಬೊಮ್ಮಿ, ಗಿರಿಜಾ ಇತರರಿದ್ದರು.