ಹುಣಸೂರು: ಎಚ್.ಡಿ.ಕೋಟೆ ತಾಲೂಕಿನ ಹೊಸಹಳ್ಳಿ ಹಾಡಿಯ ಆದಿವಾಸಿ ಗಿರಿಜನ ಕರಿಯಪ್ಪ ಸಾವಿಗೆ ಕಾರಣರಾದ ಅರಣ್ಯಾಧಿಕಾರಿ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಹುಣಸೂರು ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ, ಪಂಗಡದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನಿಂಗರಾಜ್ ಮಲ್ಲಾಡಿ ಮಾತನಾಡಿ, ಆದಿವಾಸಿ ಕರಿಯಪ್ಪನನ್ನು ಗುಂಡ್ರೆ ವಲ ಅರಣ್ಯಾಧಿಕಾರಿ ಅಮೃತೇಶ್ ಮತ್ತವರ ಸಿಬ್ಬಂದಿ ಜಿಂಕೆ ಕೊಂದು ಮಾರಾಟ ಮಾಡಿದ ಆರೋಪದಡಿ ಬಂಧಿಸಿ ಅರಣ್ಯ ವಸತಿ ನಿಲಯಕ್ಕೆ ಕರೆತಂದು ಹಲ್ಲೆ ನಡೆಸಿ ಸಾವಿಗೆ ಕಾರಣರಾಗಿದ್ದಾರೆ. ಕರಿಯಪ್ಪನ ಸಾವಿಗೆ ಕಾರಣರಾದ ಅರಣ್ಯಾಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ನಿಷೇಧ ಕಾಯ್ದೆಯಡಿ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ನೊಂದ ಕುಟುಂಬಕ್ಕೆ ಸರ್ಕಾರವೇ ಪರಿಹಾರ ಕಲ್ಪಿಸಿಕೊಡಬೇಕು ಹಾಗೂ ಮೃತರ ಮಕ್ಕಳಿಗೆ ಸರ್ಕಾರಿ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಎಂದರು. ಈ ವೇಳೆ ಮುಖಂಡರಾದ ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಆದಿದ್ರಾವಿಡ ಸಂಘದ ಅಧ್ಯಕ್ಷ ಬಿ.ಶಿವಣ್ಣ, ಆದಿವಾಸಿ ಮುಖಂಡ ಶೇಖರ ಯಶೋದರಪುರ, ಪೌರಕಾರ್ಮಿಕ ಮುಖಂಡ ಮುರುಗೇಶ ಇತರರು ಹಾಜರಿದ್ದರು.