ಕೆ.ಆರ್.ನಗರ: ಪಟ್ಟಣದ ಹಳೇ ಆದಿಚುಂಚನಗಿರಿ ಶಾಲೆ ಹಿಂಭಾಗವಿರುವ ಆದಿಜಾಂಬವ ಸಮುದಾಯಕ್ಕೆ ಸೇರಿರುವ ಆಸ್ತಿಯನ್ನು ರಕ್ಷಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಎಸ್.ಸಂತೋಷ್ ಅವರಿಗೆ ಮಾದಿಗ ಸಮುದಾಯದ ಮುಖಂಡರು ಬುಧವಾರ ಮನವಿ ಸಲ್ಲಿಸಿದರು.
ಆದಿಜಾಂಬವ ಸಮುದಾಯಕ್ಕೆ ನಿವೇಶನ ನೀಡಬೇಂಬ ಸಮಾಜದ ಮುಖಂಡ ದಿ.ಅಪ್ಪಾಜಯ್ಯ ಅವರ ಮನವಿ ಮೇರೆಗೆ ಎನ್.ರಾಚಯ್ಯ ಅವರು ಈ ಜಾಗವನ್ನು 1958 ರಲ್ಲಿ ಅಂದಿನ ಪುರಸಭಾ ಅಧ್ಯಕ್ಷ ವೈ.ಎಸ್.ಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಿರ್ಣಯ ಮಾಡಿ ನೀಡಿದ್ದರು. ಈ ಜಾಗದಲ್ಲಿ 55 ಜನರಿಗೆ ನಿವೇಶನ ಹಂಚಿಕೆ ಮಾಡಲು ಯೋಚಿಸಿ ನಂತರ 8 ಜನರಿಗೆ ಮಾತ್ರ ಹಕ್ಕು ಪತ್ರ ವಿತರಣೆ ಮಾಡಲಾಗಿತ್ತು. ಉಳಿದ ಜಾಗವನ್ನು ಸಮುದಾಯದ ಅನುಕೂಲಕ್ಕಾಗಿ ಸದ್ಬಳಕೆ ಮಾಡಿಕೊಳ್ಳಲು ಮೀಸಲಿಡಲಾಗಿತ್ತು. ಅದೇ ರೀತಿ ಈವರೆಗೆ ಉಳಿಸಿ ಸಂರಕ್ಷಣೆ ಮಾಡಿಕೊಂಡು ಬರಲಾಗಿದೆ ಎಂದು ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಎಂ.ಲೋಕೇಶ್ ತಿಳಿಸಿದರು.
ಪ್ರಬಲ ಸಮುದಾಯದವರು ಜಾಗ ವಶಪಡಿಸಿಕೊಳ್ಳಲು ಸಂಚು ನಡೆಸುತ್ತಿದ್ದಾರೆ. ಶಾಸಕ ಸಾ.ರಾ.ಮಹೇಶ್ ಸೂಚನೆ ಮೇರೆಗೆ ನಾಮಫಲಕ ಅಳವಡಿಸಲಾಗಿತ್ತು. ಆದರೆ ಕಿಡಿಗೇಡಿಗಳು ಅದನ್ನು ಕಿತ್ತು ಹಾಕಿದ್ದು, ಆ ಸಂಬಂಧ ದೂರು ನೀಡಿದ್ದೇವೆ ಎಂದರು.
ಅಖಿಲ ಕರ್ನಾಟಕ ಜೈಭೀಮ್ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಸಾಮಿಯಾನ ರಮೇಶ್, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಎಂ.ಎಸ್ ನಂಜುಂಡಸ್ವಾಮಿ, ಅಂಬೇಡ್ಕರ್ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಚಲುವರಾಜ್, ಬಹುಜನ ಸಮಾಜವಾದಿ ಪಕ್ಷದ ತಾಲೂಕು ಉಪಾಧ್ಯಕ್ಷ ಈರಯ್ಯ, ಮುಖಂಡರಾದ ಜೆಟ್ಟಿಪುಟ್ಟಸ್ವಾಮಿ, ಮಂಜು, ವಜ್ರೇಶ್ ಇತರರು ಹಾಜರಿದ್ದರು.