ನ್ಯೂಸ್

ಆದಿ ದ್ರಾವಿಡ, ಆದಿ ಕರ್ನಾಟಕ ಅಪಾಯಕಾರಿ

ಚಿತ್ರದುರ್ಗ: ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಅಪಾಯಕಾರಿ. ಇದರಿಂದ ಈವರೆಗೂ ಮೀಸಲಾತಿ ಪಡೆದಿರಬಹುದು. ಆದರೆ, ಪ್ರಸ್ತುತ ಜಾತಿ ಗಣತಿ ಸಮೀಕ್ಷೆಯಲ್ಲೂ ಇದೇ ರೀತಿ ಬರೆಸಿದಲ್ಲಿ ಮುಂದೆ ಮೀಸಲಾತಿಯಿಂದಲೇ ಮಾದಿಗ ಸೇರಿ ಸಹೋದರ ಸಮುದಾಯದವರು ವಂಚಿತರಾಗಲಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಕೆ, ಎಡಿ, ಆದಿ ಆಂಧ್ರ ಜಾತಿಗಳನ್ನು ರಾಜ್ಯ ಸರ್ಕಾರ ಜಾತಿ ಪಟ್ಟಿಯಿಂದ ತೆಗೆದು ಹಾಕಲಿದೆ. ಹೀಗಾಗಿ ಮಾದಿಗ-ಛಲವಾದಿ ಸೇರಿ ಸಹೋದರ ಸಮುದಾಯದವರು ಮೂಲ ಜಾತಿ, ನೈಜ ಮಾಹಿತಿಯನ್ನಷ್ಟೇ ನಮೂದಿಸಬೇಕು. ಗೊಂದಲಕ್ಕೆ ಒಳಗಾಗಬೇಡಿ ಎಂದರು.

ಬೇಡ ಜಂಗಮರು ಪರಿಶಿಷ್ಟರೆಂದು ಬರೆಸುತ್ತಿದ್ದಾರೆ. ಆ ಜಾತಿ ನಶಿಸಿ ಹೋಗಿದ್ದು, ಎಸ್ಸಿ ಜಾತಿ ಪಟ್ಟಿಯಿಂದ ಕೈಬಿಡಬೇಕು. ಯಾರಾದರೂ ಮೀಸಲಾತಿಯಲ್ಲಿ ನಮೂದಿಸಿದರೆ, 101 ಉಪಜಾತಿಯವರು ಸೇರಿ ಆಯೋಗಕ್ಕೆ ದೂರು ನೀಡಲಿದ್ದೇವೆ. ಜಾತಿ ಪ್ರಮಾಣ ಪತ್ರ ನೀಡಿದ ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವುದು. ಈ ವಿಚಾರವಾಗಿ ಪಕ್ಷಾತೀತವಾಗಿ ಮುಖಂಡರು ಸ್ಪಂದಿಸುವಂತೆ ಮನವಿ ಮಾಡಿದರು.

ಬೇಡ ಜಂಗಮರು ಹಿಂದೆಲ್ಲ ಮಾದಿಗ ಸಮುದಾಯದವರ ಮನೆಗಳಲ್ಲಿ ಬೇಡಿ ತಿನ್ನುವ ಸಮಾಜವಾಗಿತ್ತು. ಆಂಧ್ರದಿಂದ ವಲಸೆ ಬಂದ ಅಲೆಮಾರಿಗಳಾಗಿದ್ದು, ಹಂದಿ, ಕಾಡು ಪ್ರಾಣಿ ಬೇಟೆಯಾಡಿ ಸೇವಿಸುತ್ತಿದ್ದರು. ಇತ್ತೀಚಿನ ಕೆಲ ವರ್ಷಗಳಿಂದ ಪರಿಶಿಷ್ಟರ ಮೀಸಲಾತಿಗೆ ಕೈ ಹಾಕಿದ್ದು, ಇದು ಶೋಭೆ ತರುವ ವಿಚಾರವಲ್ಲ ಎಂದರು.