ನ್ಯೂಸ್

ಆದಾಯಕ್ಕಿಂತ ವಿದ್ಯುತ್ ಸರಬರಾಜು ವೆಚ್ಚ ಅಧಿಕ

ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ವಿದ್ಯುತ್ ದರದಿಂದ ಗಳಿಸುತ್ತಿರುವ ಆದಾಯ ಸ್ವೀಕೃತಿಗಿಂತ ವಿದ್ಯುತ್ ಸರಬರಾಜು ವೆಚ್ಚ ಅಽಕವಾಗಿದ್ದು, ಆರ್ಥಿಕ ಹೊರೆಯಾಗುತ್ತಿದೆ ಎಂದು ಸಂಘದ ರೆಸಿಡೆಂಟ್ ಇಂಜನಿಯರ್ ನೇಮಿನಾಥ ಖೇಮಲಾಪುರೆ ತಿಳಿಸಿದರು.

ಇಲ್ಲಿನ ಸಂಘದ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಂಘದ ವಿದ್ಯುತ್ ದರ ಪರಿಷ್ಕರಣೆ ಸಾರ್ವಜನಿಕ ಅಹವಾಲು ಆಲಿಕೆ ಸಭೆಯಲ್ಲಿ ಮಾತನಾಡಿದರು. ಸಂಘಕ್ಕೆ ೧೯೪.೨೪ ಕೋಟಿ ರೂ. ಪಂಪ್‌ಸೆಟ್ ಸಹಾಯಧನ ಬಾಕಿ ಇದ್ದು, ಸರ್ಕಾರದ ಆದೇಶದಂತೆ ೯೩.೨೪ ಕೋಟಿ ರೂ. ವಿದ್ಯುತ್‌ನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಖರೀದಿ ಬಾಕಿ ಮೊತ್ತದ ಮೇಲೆ ಜ.೨೦೨೫ರ ವರೆಗೆ ೧೯೪.೩೮ ಕೋಟಿ ರೂ. ಬಡ್ಡಿ ಆಕರಿಸಿದ್ದರಿಂದ ಸಂಘಕ್ಕೆ ೨೮೭.೬೨ ಕೋಟಿ ರೂ. ಆರ್ಥಿಕ ಹೊರೆಯಾಗಿದೆ. ಇದನ್ನು ಸರಿದೂಗಿಸಲು ಆಡಳಿತ ಮಂಡಳಿ ಸರ್ಕಾರದ ಸಹಾಯಧನ ರೂಪದಲ್ಲಿ ೨೮೭.೬೨ ಕೋಟಿ ರೂ. ಮೊತ್ತವನ್ನು ಸಂಘಕ್ಕೆ ಬಿಡುಗಡೆಗೊಳಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದರು.

ಕೆಇಆರ್‌ಸಿ ಅಧ್ಯಕ್ಷ ಪಿ.ರವಿಕುಮಾರ ಮಾತನಾಡಿ, ಅಂದಾಜು ಕೊರತೆ ಗಮನದಲ್ಲಿಟ್ಟುಕೊಂಡು ಪ್ರತಿ ಯೂನಿಟ್‌ಗೆ ೨೦೨೬ಕ್ಕೆ ೧೭ ಪೈಸೆ, ೨೦೨೭ಕ್ಕೆ ೧೮ ಪೈಸೆ ಹಾಗೂ ೨೦೨೮ಕ್ಕೆ ೨೩ ಪೈಸೆ ವಿದ್ಯುತ್ ದರ ಹೆಚ್ಚಳ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದನ್ನು ತಿಳಿಸಿದರು.

ಸಂಘದ ಅಧ್ಯಕ್ಷ ಕಲಗೌಡ ಪಾಟೀಲ ಮಾತನಾಡಿ, ಐಪಿ ಲೈನ್ ಮೇಲೆ ಬರುವ ಅಂದಾಜು ೧೩,೫೦೦ ತೋಟದ ಮನೆಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಪರಿವರ್ತಕ ಅಳವಡಿಸಿ ನಿರಂತರ ವಿದ್ಯುತ್ ಸರಬರಾಜಿಗೆ ಇಂಧನ ಇಲಾಖೆ ಸಲ್ಲಿಸಿದ ೪೪.೧೮ ಕೋಟಿ ರೂ. ಮೊತ್ತದ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರದಿಂದ ಮಂಜೂರು ಮಾಡಿಸಲು ಸಹಕರಿಸಬೇಕು. ಸಂಘದ ಕಾರ್ಯವ್ಯಾಪ್ತಿಯ ಎಚ್.ಟಿ. ವಿದ್ಯುತ್ ಗ್ರಾಹಕರು ಮುಕ್ತ ಮಾರುಕಟ್ಟೆಯಿಂದ ವಿದ್ಯುತ್ ಖರೀದಿಸುತ್ತಿದ್ದಾರೆ. ಇದು ಸಂಘದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ನಿಯಂತ್ರಿಸಬೇಕೆಂದು ಆಯೋಗಕ್ಕೆ ವಿನಂತಿಸಲಾಯಿತು. ಸರ್ಕಾರದಿಂದ ಸಹಾಯಧನ ಬಾಕಿ ಮೊತ್ತ ಬೇಗ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

೧೦ ಮತ್ತು ೧೨ನೇ ತರಗತಿ ಪರೀಕ್ಷೆ ದೃಷ್ಟಿಯಿಂದ ಸಂಜೆ ೬ ಗಂಟೆಯಿಂದ ಬೆಳಗ್ಗೆ ೬ ಗಂಟೆಯವರೆಗೆ ತಡೆರಹಿತ ವಿದ್ಯುತ್ ಪೂರೈಸಲು ಆಡಳಿತ ಮಂಡಳಿಯಿಂದ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.

ಕೆಇಆರ್‌ಸಿ ಅಧ್ಯಕ್ಷ ಪಿ.ರವಿಕುಮಾರ, ಸದಸ್ಯರಾದ ಎಚ್.ಕೆ. ಜಗದೀಶ, ಜಾವಿದ್ ಅಖ್ತರ್, ನಿರ್ದೇಶಕರಾದ ಸಫಿವುಲ್ಲಾ ಖಾನ್, ತಾಂತ್ರಿಕ ನಿರ್ದೇಶಕ ಶ್ರೀನಿವಾಸಪ್ಪ, ಉಪ ನಿರ್ದೇಶಕ ಮುಜಮಿಲ್ಲಾ ಖಾನ್ ಇತರರಿದ್ದರು. ಸಂಘದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ ಸ್ವಾಗತಿಸಿದರು. ಎಸ್.ನಾಯಿಕ ವಂದಿಸಿದರು.

ಸಂಘವು ಇಂಧನ ಇಲಾಖೆಗೆ ಸಲ್ಲಿಸಿದ ೪೪.೧೮ ಕೋಟಿ ರೂ. ಮೊತ್ತದ ಪ್ರಸ್ತಾವನೆ ಬೇಗನೆ ಮಂಜೂರಾದರೆ, ೧೩,೫೦೦ ತೋಟಪಟ್ಟಿ ಮನೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಸಮಸ್ಯೆ ಬಗೆಹರಿಯುತ್ತದೆ. | ಪೃಥ್ವಿ ಕತ್ತಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ