ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಆತಂಕ ಬಿಟ್ಟು, ಭರವಸೆ ಹೆಚ್ಚಿಸಿಕೊಳ್ಳಿ. ಏಕಾಗ್ರತೆ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪರೀಕ್ಷೆ ಯಶಸ್ಸಿನ ತಂತ್ರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು, ಆತ್ಮವಿಶ್ವಾಸ, ಸಮಯ ಪಾಲನೆ, ನೆನಪಿನ ಶಕ್ತಿ, ಪರೀಕ್ಷೆ ಬರೆಯುವ ತಂತ್ರ ಕಲಿತರೆ ಗೆಲುವು ನಿಮ್ಮದೆ ಎಂದು ಹೇಳಿದರು.
ಪರೀಕ್ಷೆ ಬಗ್ಗೆ ತಿಳಿವಳಿಕೆ ಇರಬೇಕು. ಪಠ್ಯಕ್ರಮ, ಪರೀಕ್ಷೆ ಮಾದರಿ, ಹಿಂದಿನ ವರ್ಷದ ಪ್ರಶ್ನೆ ಪ್ರತ್ರಿಕೆಗಳ ಅಧ್ಯಯನದ ಜತೆಗೆ ಪ್ರತಿನಿತ್ಯ ದಿನಪತ್ರಿಕೆ, ನಿಮ್ಮಿಷ್ಟದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಅಹಂಕಾರ ಬಿಡಿ ಮಾನವೀಯತೆ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಓದುವ ಸಮಯದಲ್ಲಿ ನಿಮ್ಮ ಸುತ್ತಮುತ್ತಲಿನ ಪರಿಸರ, ಜನಸಾಮಾನ್ಯರ ಸಮಸ್ಯೆ, ಜೈವಿಕ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಿ. ಪ್ರತಿ ವರ್ಷದ ಪ್ರಶ್ನೆ ಪತ್ರಿಕೆ ತಾಳೆ ಹಾಕಿ ಜತೆಗೆ ಪ್ರತಿದಿನ ನಿಮ್ಮ ಶಬ್ದಕೋಶ ಹೆಚ್ಚಿಸಿಕೊಳ್ಳಿ. ಸಮಸ್ಯೆ ಎಂತಹದ್ದೆ ಇರಲಿ ಎದುರಿಸುವ ಧೈರ್ಯ ಬೆಳೆಸಿಕೊಳ್ಳಿ. ಪರೀಕ್ಷೆ ಬಗ್ಗೆ ಗಮನದ ಜತೆಗೆ ಕಣ್ಣಿನ ನೋಟ ಗುರಿಯ ಕಡೆ ಇರಲಿ ಎಂದರು.
ಮುಕ್ತಭಂಡಾರ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ, ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಇದ್ದೇ ಇರುತ್ತದೆ. ಅವುಗಳನ್ನು ಧೈರ್ಯದಿಂದ ಎದುರಿಸಿ ನಿಮ್ಮ ಗುರಿ ತಲುಪಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಹೆಚ್ಚಬೇಕು. ಇಲ್ಲಿಯೂ ಸಹ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದೀರಾ, ಮಹಿಳೆಯರ ಶ್ರದ್ಧೆ ಮತ್ತು ನಿಷ್ಠೆ ಇಂದಿನ ಕೆಲಸಗಳಿಗೆ ತುಂಬಾ ಅನಿವಾರ್ಯ. ಮೊಬೈಲ್ ಗೀಳು ಯುವ ಸಮೂಹ ಹಾಗೂ ಸಮಾಜವನ್ನು ಹಾಳು ಮಾಡುತ್ತಿದೆ. ಸಮಯವೇ ಸಿಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ಜನರು ಮೊಬೈಲ್‌ನಲ್ಲಿ ರೀಲ್ಸ್ ಸ್ಕ್ರಾಲ್ ಮಾಡೊದು ಬಿಟ್ಟು, ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ. ಮುಖ್ಯವಾಗಿ ಯುವ ಸಮೂಹ ಮೊಬೈಲ್ ಗೀಳಿನಿಂದ ಹೊರಬಂದು ಪರಿಶ್ರಮ ಪಟ್ಟು ಅಧ್ಯಯನ ಮಾಡಬೇಕು ಎಂದರು.
ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಮಾತನಾಡಿ, ಶಿಬಿರಾರ್ಥಿಗಳು ಸತತ ಪ್ರಯತ್ನ ಪಟ್ಟು ಅಧ್ಯಯನ ಮಾಡಬೇಕು. ನಿಮ್ಮ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಗುರು-ಹಿರಿಯರು ಹಾಗೂ ಅನುಭವಿಗಳು ಹೇಳುವ ಅನುಭವಗಳನ್ನು ಪಾಲಿಸಬೇಕು. ಅರಿವೇ ಗುರು ಎನ್ನುವ ಹಾಗೆ ನಿಮ್ಮನ್ನು ನೀವೇ ಆತ್ಮ ಅವಲೋಕನೆ ಮಾಡಿಕೊಳ್ಳಿ. ಯಶಸ್ಸಿಗೆ ಗುರಿ ದೊಡ್ಡದಾಗಿರಲಿ. ಎಲ್ಲರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭವಿಷ್ಯದಲ್ಲಿ ದೇಶಕ್ಕೆ ಮಾದರಿಯಾಗುವ ಅಧಿಕಾರಿಗಳಾಗಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಪರೀಕ್ಷಾಂಗ ಕುಲಸಚಿವ ಎಚ್.ವಿಶ್ವನಾಥ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಬಿ.ಗಣೇಶ ಕೆ.ಜಿ.ಕೊಪ್ಪಲ್ ಇದ್ದರು.