ನ್ಯೂಸ್

ಆತಿಥೇಯ ಮೈಸೂರು ತಂಡ ಸೆಮಿಫೈನಲ್‌ಗೆ

ಸಾಂಘಿಕ ಪ್ರದರ್ಶನ ನೀಡಿದ ಆತಿಥೇಯ ಮೈಸೂರು ವಿಶ್ವವಿದ್ಯಾಲಯ ತಂಡವು ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಜತೆಗೆ ಕ್ಯಾಲಿಕಟ್, ಬೆಂಗಳೂರು ನಗರ ಹಾಗೂ ಹಾಗೂ ಮದ್ರಾಸ್ ವಿಶ್ವವಿದ್ಯಾಲಯ ತಂಡಗಳು ಕೂಡ ಸೆಮಿ ಫೈನಲ್ ಪ್ರವೇಶಿಸಿವೆ.

ನಗರದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಜ.28 ರಂದು ಸೆಮಿ ಫೈನಲ್ ಪಂದ್ಯ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮೈಸೂರು ವಿವಿ ತಂಡ, ಮದ್ರಾಸ್ ವಿವಿ ವಿರುದ್ಧ ಸೆಣಸಲಿದೆ. ಇದಕ್ಕೂ ಮುನ್ನ ಬೆಳಗ್ಗೆ 8.30ಕ್ಕೆ ಕ್ಯಾಲಿಕಟ್ ವಿವಿ ಮತ್ತು ಬೆಂಗಳೂರು ನಗರ ವಿವಿ ತಂಡಗಳ ನಡುವೆ ಮತ್ತೊಂದು ಸೆಮಿ ಫೈನಲ್ ಕಾದಾಟ ನಡೆಯಲಿದೆ.

ಕಾಕಿನಾಡ ವಿರುದ್ಧ ಜಯ: ಸೋಮವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಮೈಸೂರು ವಿವಿ ತಂಡ ಮಾರಕ ಬೌಲಿಂಗ್ ದಾಳಿ ಹಾಗೂ ಅದಿತಿ ರಾಜೇಶ್(43 ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಜೆಎನ್‌ಟಿಯು ಕಾಕಿನಾಡ ವಿವಿ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಕಾಕಿನಾಡ ತಂಡ ನಿಗದಿತ 25 ಓವರ್‌ಗಳಲ್ಲಿ 4 ವಿಕೆಟ್‌ಗೆ 90 ರನ್ ಮಾತ್ರ ಕಲೆಹಾಕಿತು. ಪ್ರತಿಯಾಗಿ ಸಾಧಾರಣ ಮೊತ್ತ ಬೆನ್ನಟ್ಟಿದ ಮೈಸೂರು ವಿವಿ ತಂಡ ಕೇವಲ 12 ಓವರ್‌ಗಳಲ್ಲಿ 2 ವಿಕೆಟ್‌ಗೆ 92 ರನ್ ಪೇರಿಸಿ ಜಯಿಸಿತು.