ಬೆಂಗಳೂರು: ತಿದ್ದುಪಡಿ ಬಿಲ್ ಗಳ ಚರ್ಚೆ, ಅಂಗೀಕಾರಕ್ಕೆ ಆಡಳಿತ ಪಕ್ಷದ ಪಟ್ಟು, ನಿಯಮ 330ಕ್ಕೆ ಪರಿವರ್ತಿಸಿದ ವಿಷಯಗಳ ಚರ್ಚೆಗೆ ಪ್ರತಿಪಕ್ಷಗಳ ಬಿಗಿಪಟ್ಟು, ಗೊಂದಲ ಉಂಟಾಗಿ ವಿಧಾನ ಪರಿಷತ್ ಕಲಾಪವನ್ನು 10 ನಿಮಿಷಗಳ ಕಾಲ ಸಭಾಪತಿ ಕೆ.ಪ್ರತಾಪಚಂದ್ರಶೆಟ್ಟಿ ಮಂದೂಡಿದರು.
ಪ್ರಮುಖ ಬಿಲ್ ಗಳಿವೆ ಪಾಸ್ ಮಾಡಿಸಬೇಕು ಎಂದು ಸಭಾನಾಯಕ ಕೋಟ ಶ್ರಿನಿವಾಸ ಪೂಜಾರಿ ಮನವಿ ಮಾಡಿಕೊಂಡಾಗ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಜೆಡಿಎಸ್ ನ ಬಸವರಾಜ ಪಾಟೀಲ್ ತಕರಾರು ತೆಗೆದರು.
ನಿಯಮ 330ಕ್ಕೆ ಪರಿವರ್ತಿಸಿದ ಡಿ.ಜೆ.ಹಳ್ಳಿ ಘಟನೆ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ಮೊದಲಿಗೆ ಚರ್ಚೆಯಾಗಲಿ. ನಂತರ ರಾತ್ರಿ ಎಷ್ಟು ಹೊತ್ತಾದರೂ ಪರವಾಗಿಲ್ಲ ಬಿಲ್ ಪಾಸ್ ಮಾಡಿಸುತ್ತೇವೆ ಎಂದರು.
ಸದನದಲ್ಲಿ ಈವರೆಗೆ 32 ಬಿಲ್ ಗಳು ಪಾಸ್ ಮಾಡಿಕೊಡಲಾಗಿದೆ. ಚಿಂತಿಸಬೇಡಿ ಎಂದು ಸಭಾಪತಿ ಅಭಯ ನೀಡಿದರು.
ಸದನದಲ್ಲಿ ಬಿಲ್ ಗೆ ಮೊದಲ ಆದ್ಯತೆ ನೀಡಬೇಕು ಎಂದು ನೀವು (ಎಸ್.ಆರ್.ಪಾಟೀಲ್, ಹೊರಟ್ಟಿ) ಆಡಳಿತದಲ್ಲಿದ್ದಾಗ ಹೇಳಿದಿರಿ. ಈಗ ವಿಷಯದ ಚರ್ಚೆಗೆ ಪಟ್ಟು ಹಿಡಿದಿರುವಿರಿ. ಇದ್ಯಾವ ನ್ಯಾಯವೆಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.
ಜತೆಗೆ ಮರಿತಿಬ್ಬೇಗೌಡರು ಪ್ರಸ್ತಾಪಿಸಿದ ವಿಷಯ ಚರ್ಚೆಯಾಗಲಿ, ಬಿಲ್ ಗಳಿಗೆ ಅನುಮೋದನೆ ಪಡೆದ ಬಳಿಕ ಉಳಿದ ವಿಷಯಗಳನ್ನು ಅಹೋರಾತ್ರಿ ಚರ್ಚೆಗೆ ಸಿದ್ಧವೆಂದರು.
ಎರಡೂ ಕಡೆಯವರ ಜಿದ್ದಿನಿಂದಾಗಿ ಸಭಾಪತಿ ಕಲಾಪವನ್ನು 10 ನಿಮಿಷ ಮುಂದೂಡಿದರು.