ಎನ್.ಆರ್.ಪುರ: ಆಟೋ ಚಾಲಕರು ವರ್ಷಪೂರ್ತಿ ಕನ್ನಡದ ತೇರನ್ನು ಎಳೆಯುತ್ತಾರೆ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಜೈ ಶ್ರೀ ಭುವನೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಹಾಗೂ ಕನ್ನಡಪರ ಕಾರ್ಯಕ್ರಮಗಳಲ್ಲಿ ಆಟೋ ಚಾಲಕರ ಸೇವೆ ಹಿರಿದು. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮೂಲಕ ವೃತ್ತಿಯೊಂದಿಗೆ ಮಾನವೀಯ ಗುಣಗಳನ್ನು ಅಳವಡಿಸಿಕೊಂಡಿದ್ದಾರೆ. ಜನಪ್ರತಿನಿಧಿಗಳು ಒಟ್ಟಾಗಿ ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರು, ಅಭಯಾರಣ್ಯ ಸೇರಿ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಿದರೆ ತಾಲೂಕು ಪ್ರವಾಸಿಗರ ತಾಣವಾಗಿ ಆಟೋ ಚಾಲಕರಿಗೂ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮಹಾರಾಜರು ಆಳ್ವಿಕೆ ಮಾಡಿದ ಕರ್ನಾಟಕ ದೇಶ, ವಿದೇಶಗಳಿಗೆ ಮಾದರಿಯಾಗಿದೆ. ರಾಜ್ಯದ ಅನೇಕ ಕವಿಗಳ ಕಾದಂಬರಿಯು ಚಲನಚಿತ್ರವಾಗಿ ತೆರೆಯ ಮೇಲೆ ಬಂದಿದೆ. ನವೆಂಬರ್ ಕನ್ನಡಿಗರಿಗೆ ಸಂಭ್ರಮದ ತಿಂಗಳಾಗಿದೆ. ದೈನಂದಿನ ವ್ಯವಹಾರದಲ್ಲಿ ಪ್ರತಿಯೊಬ್ಬರೂ ಕನ್ನಡ ಬಳಸಬೇಕು ಎಂದು ಹೇಳಿದರು. ರಾಮನಗರದ ಲೋಕಾಯುಕ್ತ ಡಿಎಸ್‌ಪಿ ಸುಧೀರ್ ಮಾತನಾಡಿ, ಕನ್ನಡಪರ ಸಂಘಟನೆಗಳ ಹೋರಾಟದ ಲವಾಗಿ ರಾಜ್ಯದ ಎಲ್ಲ ಕಡೆ ಈಗ ಕನ್ನಡ ನಾಮಲಕ ಹೆಚ್ಚಾಗಿ ಕಾಣುತ್ತಿದೆ. ಉದ್ಯೋಗದಲ್ಲೂ ಕನ್ನಡಿಗರಿಗೆ ಮೀಸಲಾತಿ ದೊರೆಯುತ್ತಿದೆ. ಎನ್.ಆರ್.ಪುರದಲ್ಲಿ ಆಟೋ ಸಂಘದವರು ರಕ್ತದಾನ ಶಿಬಿರ ನಡೆಸಿ ಸಾಮಾಜಿಕ ಕಾರ್ಯ ಮಾಡಿದ್ದಾರೆ ಎಂದರು.
ಲೋಕಾಯುಕ್ತ ಡಿಎಸ್‌ಪಿ ಎಸ್.ಸುಧೀರ್ ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು. ರಕ್ತದಾನ ಮಾಡಿದವರಿಗೆ ಅಭಿನಂದನಾ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಜೈ ಶ್ರೀ ಭುವನೇಶ್ವರಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ವಿ.ಮಧುಸೂದನ್, ಪಪಂ ಅಧ್ಯಕ್ಷೆ ಸುರೈಯಾಭಾನು, ಸ್ಥಾಯಿ ಸಮಿತಿ ಸದಸ್ಯ ಪ್ರಶಾಂತ್ ಎಲ್.ಶೆಟ್ಟಿ, ಮುಖಂಡರಾದ ಜುಬೇದಾ, ಪೂರ್ಣೇಶ್, ಅರುಣಕುಮಾರ್, ಬಿ.ಎಸ್.ಆಶೀಶ್‌ಕುಮಾರ್, ಪಿ.ಆರ್.ಸದಾಶಿವ, ಪಿ.ಜೆ.ಆಂಟೋನಿ, ಜಗದೀಶ್, ಚಂದ್ರಶೇಖರ್, ಕಣಿವೆ ವಿನಯ್, ವಕೀಲ ಜಿ.ದಿವಾಕರ, ಗೂಡ್ಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ಸುನೀಲ್, ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಅಣ್ಣಪ್ಪ ಮತ್ತಿತರರಿದ್ದರು. ಸರಿಗಮಪ ಖ್ಯಾತಿಯ ದಿಯಾ ಹೆಗ್ಡೆ, ಸಂದೇಶ್ ಹಾಗೂ ಎದೆ ತುಂಬಿ ಹಾಡುವೆನು ಖ್ಯಾತಿಯ ನಾದಿರಾಭಾನು ಇತರ ಕಲಾವಿದರು ಸಂಗೀತ ಸಂಜೆ ನಡೆಸಿಕೊಟ್ಟರು.