ಚನ್ನರಾಯಪಟ್ಟಣ: ತಾಲೂಕಿನ ದೊಡ್ಡೇರಿ ಕಾವಲು(ಬ್ಲಾಕ್-01) ಗ್ರಾಮದ ಹೊರ ವಲಯದ ತೋಟವೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೊಬ್ಬರಿ ಶೆಡ್ ಹಾಗೂ ರಾಗಿ ಹುಲ್ಲಿನ ಮೆದೆ ಸಂಪೂರ್ಣ ಭಸ್ಮವಾಗಿದೆ.
ಗ್ರಾಮದ ನಿಂಗೇಗೌಡ ಅವರು ತಮ್ಮ ತೋಟದಲ್ಲಿ ಮನೆ ಕಟ್ಟಿಕೊಂಡು ಸುಮಾರು ವರ್ಷಗಳಿಂದ ವಾಸವಿದ್ದು ಪಕ್ಕದಲ್ಲಿಯೇ ಶೆಡ್ ನಿರ್ಮಿಸಿಕೊಂಡು ಕೊಬ್ಬರಿ ತುಂಬಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಜತೆಗೆ ಅಲ್ಲಿಯೇ ರಾಗಿ ಹುಲ್ಲಿನ ಮೆದೆ ಸಂಗ್ರಹಿಸಿಕೊಂಡಿದ್ದಾರೆ.
ಭಾನುವಾರ ರಾತ್ರಿ 11.30 ರ ಸುಮಾರಿನಲ್ಲಿ ಕೊಬ್ಬರಿ ಶೆಡ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಹೊಗೆ ಹರಡಿಕೊಂಡಿದೆ. ಇದರಿಂದ ಎಚ್ಚೆತ್ತ ಮನೆಯವರಿಗೆ ಶೆಡ್‌ಗೆ ಬೆಂಕಿ ಬಿದ್ದಿರುವುದು ಗೊತ್ತಾಗಿದೆ. ಕೂಗಾಡಿದ್ದರಿಂದ ಅಕ್ಕ-ಪಕ್ಕದವರು ಹಾಗೂ ಗ್ರಾಮಸ್ಥರು ದೌಡಾಯಿಸಿ ಬಂದಿದ್ದಾರೆ.
ಮೊದಲು ಬಿಂದಿಗೆಯಲ್ಲಿ ನೀರು ಎರಚಿ, ಹಸಿ ತೆಂಗಿನ ಗರಿ ಹಾಗೂ ಸೊಪ್ಪಿನ ಗಿಡಗಳಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಗಾಳಿ ಬೀಸಿದಂತೆಲ್ಲ ಬೆಂಕಿ ಜೋರಾಗಿ ಹರಡಿಕೊಂಡು ಶೆಡ್ ಹಾಗೂ ರಾಗಿ ಹುಲ್ಲಿನ ಮೆದೆ ಮುಗಿಲೆತ್ತರ ಕಿನ್ನಾಲಿಗೆ ಚಾಚಿ ಹೊತ್ತಿ ಉರಿದಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚನ್ನರಾಯಪಟ್ಟಣದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮುರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಇದರಿಂದ ಸದ್ಯ ಪಕ್ಕದಲ್ಲಿಯೇ ಇದ್ದ ವಾಸದ ಮನೆಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.
ಶೆಡ್‌ನಲ್ಲಿ ತುಂಬಿದ್ದ 15 ಸಾವಿರ ಕೊಬ್ಬರಿ, 5 ರಿಂದ 7 ಸಾವಿರ ಹಸಿ ತೆಂಗಿನಕಾಯಿ ಹಾಗೂ ಶೆಡ್‌ನ ಮೇಲ್ಛಾವಣಿ ಸೇರಿದಂತೆ ಪಕ್ಕದಲ್ಲಿ ಮೆದೆ ಮಾಡಿ ಸಂಗ್ರಹಿಸಿದ್ದ ಮೂರು ಟ್ರ್ಯಾಕ್ಟರ್‌ನಷ್ಟು ರಾಗಿ ಹುಲ್ಲು ಸಹ ಸಂಪೂರ್ಣ ಸುಟ್ಟು ಕರಕಲಾಗಿದೆ.
ಕೊಬ್ಬರಿ ಶೆಡ್‌ನ ಉಳಿದ ಭಾಗದಲ್ಲಿ ಪ್ರತಿದಿನ ರಾತ್ರಿ ವೇಳೆ ಜಾನುವಾರುಗಳನ್ನು ಕಟ್ಟುತಿದ್ದರು. ಆದರೆ ಚಿರತೆ ಕಾಟದ ಪರಿಣಾಮ ಇತ್ತೀಚಿನ ದಿನಗಳಿಂದ ಮನೆಗೆ ಹೊಂದಿಕೊಂಡಂತೆ ಮತ್ತೊಂದು ಕೊಟ್ಟಿಗೆಯಲ್ಲಿ ಜಾನುವಾರುಗಳನ್ನು ಕಟ್ಟಿದ್ದರಿಂದ ಸದ್ಯ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ರೈತ ನಿಂಗೇಗೌಡ ವಿಜಯವಾಣಿಗೆ ತಿಳಿಸಿದರು.
ಸೋಮವಾರ ಬೆಳಗ್ಗೆ ಹಿರೀಸಾವೆ ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.