ನ್ಯೂಸ್

ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆಗೆ ಆಕ್ರೋಶ


  • ಹಾಸನ : ಸರ್ಕಾರಿ ಆಸ್ಪತ್ರೆ ಗುತ್ತಿಗೆ ಆಂಬುಲೆನ್ಸ್ ಚಾಲಕನ ಮೇಲೆ ಕೆಲ ಸಾರ್ವಜನಿಕರು ಹಲ್ಲೆ ನಡೆಸಿದ ಸಂದರ್ಭ ದೂರು ನೀಡಿದರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮೀನಮೇಷ ಎಣಿಸುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ಬೇಲೂರು ಆಸ್ಪತ್ರೆ ಮುಂಭಾಗ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

  • ಆಂಬುಲೆನ್ಸ್ ಚಾಲಕ ಗೋಪಾಲಕೃಷ್ಣ ಮಾತನಾಡಿ, ತಾಲೂಕಿನ ಗೋಣಿಸೋಮನಹಳ್ಳಿ ಗ್ರಾಮದ ಮಗುವೊಂದಕ್ಕೆ ಅನಾರೋಗ್ಯದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯುವ ಸಂದರ್ಭ ನಿಡಗೋಡು ಗ್ರಾಮದ ದರ್ಶನ್ ಎಂಬುವರು ಆಂಬುಲೆನ್ಸ್ ಶುಲ್ಕದ ವಿಚಾರದಲ್ಲಿ ವಿವಾದ ಸೃಷ್ಟಿಸಿ, ಅವಾಚ್ಯ ಶಬ್ದದಿಂದ ನಿಂದಿಸಿದಲ್ಲದೆ ನಮ್ಮ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸರಿಗೆ ದೂರು ನೀಡಿದರೆ, ಹೊರಗುತ್ತಿಗೆ ನೌಕರರಿಗೆ ಸರ್ಕಾರಿ ನೌಕರರಿಗಿರುವ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಾದ್ಯವಿಲ್ಲ ಎಂದು ಇಲ್ಲಿವರೆಗೂ ಕ್ರಮ ಕೈಗೊಂಡಿಲ್ಲ. ಹೀಗಾದರೆ ನಮಗೆ ಯಾರು ಭದ್ರತೆ ನೀಡುವರು ಎಂದು ಪ್ರಶ್ನಿಸಿದರು.
  • ಸರ್ಕಾರಿ ನೌಕರರಂತೆ ನಾವು ಪ್ರತಿದಿನ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ. ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣದ ರೀತಿ ಭೇದ ತೋರುತ್ತಿದೆ. ಇದರಿಂದಾಗಿ ಪೊಲೀಸರು ಪ್ರಕರಣ ದಾಖಲಿಸಲು ಹಿಂಜರಿಯುತ್ತಿದ್ದಾರೆ. ತಕ್ಷಣವೇ ನಮ್ಮ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸಬೇಕು. ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲರಿಗೂ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

  • ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಕೆ.ಎಸ್.ಲಿಂಗೇಶ್, ಅಸ್ಪತ್ರೆ ಸಿಬ್ಬಂದಿ ರೋಗಿಗಳಿರುವ ಸಂದರ್ಭ ಪ್ರತಿಭಟನೆ ಮಾಡುವುದು ಸೂಕ್ತವಲ್ಲ, ಸರ್ಕಾರಿ ಮತ್ತು ಹೊರಗುತ್ತಿಗೆ ಎಂಬ ಭೇದವಿಲ್ಲದೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಸಭೆ ಕರೆದು ಚರ್ಚಿಸಿ ಸಮಸ್ಯೆಗೆ ಪರಿಹರಿಸೋಣ ಎಂದರು.
  • ಶಾಸಕರ ಮಾತಿಗೆ ಸ್ಪಂದಿಸಿ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ಕೈಬಿಟ್ಟರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಸಿಬ್ಬಂದಿ ಚಂದ್ರು, ಗೋಪಾಲ್, ರಾಘವೇಂದ್ರ, ಚಂದ್ರಶೇಖರ್, ರವಿಕುಮಾರ್, ಚರಣ್ ಸೇರಿದಂತೆ ಇತರರಿದ್ದರು.