ನ್ಯೂಸ್

ಅಹವಾಲು ಅನುಮೋದನೆ ಶ್ಲಾಘನೆ

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನೀಡಿದ ಹಲವು ಅಹವಾಲುಗಳನ್ನು ಪರಿಷ್ಕರಿಸಿ ಅನುಮೋದನೆ ನೀಡಿರುವುದನ್ನು ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಶ್ಲಾಘಿಸಿದ್ದಾರೆ.

ಸಂಸ್ಥೆಯ ಪದಾಧಿಕಾರಿಗಳು ಅನೇಕ ಬಾರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅದಾಲತ್‌ನಲ್ಲಿ ಭಾಗವಹಿಸಿ, ಕೈಗಾರಿಕೋದ್ಯಮಿಗಳು ವ್ಯಾಪಾರಸ್ಥರು ಹಾಗೂ ಹಲವು ಸಂಸ್ಥೆಗಳು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಪೂರಕವಾಗಿ ಆಯೋಗವು ಜಕಾತಿ ಆದೇಶ ದಿನಾಂಕ 27.03.2025 ರಲ್ಲಿ ಕರ್ನಾಟಕದ ಎಲ್ಲ ವಿತರಣಾ ಪರವಾನಗಿದಾರರಿಗೆ ನಿಯಂತ್ರಣ ಅವಧಿಯ 3 ವರ್ಷಗಳಿಗೆ (2025-26, 2026-27 ಮತ್ತು 2027-28) ಆರ್ಥಿಕ ವರ್ಷಗಳಿಗೆ ಚಿಲ್ಲರೆ ವಿದ್ಯುತ್ ಸರಬರಾಜು ಜಕಾತಿಯನ್ನು ಅನುಮೋದಿಸಿದೆ. ಮುಖ್ಯವಾಗಿ, ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾ, ಶಿಕ್ಷಣ ಸಂಸ್ಥೆ ಗಳೂ, ಆಸ್ಪತ್ರೆಗಳಿಗೆ ಜಕಾತಿ ದರವನ್ನು ಗಣನೀಯವಾಗಿ ಕಡಿಮೆಗೊಳಿಸಲಾಗಿದೆ.

ಎಲ್.ಟಿ. ಗೃಹ ಬಳಕೆ ಸಂಬಂಧ ಹಿಂದಿನ ವರ್ಷದಲ್ಲಿ ಪ್ರತಿ ಯೂನಿಟ್ ಗೆ ಒಂದು ರೂ. ಹತ್ತು ಪೈಸೆ ಕಡಿತ ದೊಂದಿಗೆ, 2025-26 ರಲ್ಲಿ ವಿದ್ಯುತ್ ಶುಲ್ಕವನ್ನು 10 ಪೈಸೆ ಮತ್ತು 2027-28 ರಲ್ಲಿ 5 ಪೈಸೆ ಕಡಿತಗೊಳಿಸಲಾಗಿದೆ. ಎಲ್.ಟಿ.ಕೈಗಾರಿಕೆ ಸಂಬಂಧ 2025-26 ರ ಆರ್ಥಿಕ ವರ್ಷಕ್ಕೆ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 160 ಪೈಸೆಗಳಷ್ಟು ಕಡಿತಗೊಳಿಸಿದೆ. ಹೀಗೆ ನಮ್ಮ ಸಂಸ್ಥೆ ನೀಡಿದ್ದ ಮನವಿಗೆ ಆಯೋಗ ಸ್ಪಂದಿಸಿದೆ. ಇದರಿಂದ ವಾಣಿಜ್ಯ, ಕೈಗಾರಿಕೆಗಳು, ಜನಸಾಮಾನ್ಯರಿಗೆ, ಆಸ್ಪತ್ರೆಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಲಾಭವಾಗಲಿದೆ ಹಾಗೂ ಕೈಗಾರಿಕೆಗಳು ಹೆಚ್ಚು ಅಭಿವೃದ್ಧಿಯಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಕೆ.ಬಿ. ಲಿಂಗರಾಜು ಹರ್ಷ ವ್ಯಕ್ತಪಡಿಸಿದ್ದಾರೆ.