ನ್ಯೂಸ್

ಅಸಲು ಮಾತ್ರ ಕಟ್ಟುತ್ತೇವೆ, ಸಾಲ ತೀರುವಳಿ ಅದಾಲತ್ ಬಹಿಷ್ಕರಿಸಿ ವಾಗ್ವಾದಕ್ಕಿಳಿದ ರೈತರು

ಕೈಲಾಂಚ

ಸಾಲ ತೀರುವಳಿ ವಿಧಾನ ಅವೈಜ್ಞಾನಿಕವಾಗಿದ್ದು, ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಸಾಲ ತೀರುವಳಿ ಅದಾಲತ್ ಬಹಿಷ್ಕರಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಬ್ಯಾಂಕ್‌ನಿಂದ ಹೋಬಳಿ ವ್ಯಾಪ್ತಿಯ ರೈತರಿಗೆ 2002ರಿಂದಲೂ ಬೆಳೆ ಸಾಲ ನೀಡಲಾಗಿದೆ. ಹೀಗಾಗಿ ಅಸಲು, ಬಡ್ಡಿ, ಚಕ್ರಬಡ್ಡಿ ಸೇರಿ ಸಾಲದ ಮೊತ್ತ 5-6ಪಟ್ಟು ಹೆಚ್ಚಾಗಿದ್ದು, ಸುಸ್ತಿ ಸಾಲ ವಸೂಲಿಗಾಗಿ ಬ್ಯಾಂಕ್‌ನಿಂದ ಸಾಲ ತೀರುವಳಿ ಅದಾಲತ್ ಏರ್ಪಡಿಸಲಾಗಿತ್ತು.

ಸುಮಾರು 100 ರೈತರಿಗೆ ಅದಾಲತ್‌ನಲ್ಲಿ ಭಾಗವಹಿಸುವಂತೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅದರಂತೆ ರೈತರು ಭಾಗವಹಿಸಿದ್ದರು. ರೈತರು ಪಡೆದ ಸಾಲದ ಮೇಲಿನ ಬಡ್ಡಿಯ ನಿರ್ದಿಷ್ಟ ಮೊತ್ತಕ್ಕೆ ಮಾತ್ರ ರಿಯಾಯಿತಿ ಅನ್ವಯವಾಗುತ್ತದೆ. ಉಳಿದ ಹಣ ಕಟ್ಟಬೇಕು ಎಂದು ಅಧಿಕಾರಿಗಳು ಹೇಳಿದ್ದರಿಂದ ಕೋಪಗೊಂಡ ರೈತರು ವಾಗ್ವಾದಕ್ಕಿಳಿದರು. ಈಗಾಗಲೇ ರೈತರು ಅನೇಕ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದಾರೆ.

50 ಸಾವಿರ ಸಾಲಕ್ಕೆ 3 ಲಕ್ಷ ರೂ.ವರೆಗೆ ಹಣ ಕಟ್ಟಬೇಕು. ಒಂದಿಷ್ಟು ಹಣ ಮಾತ್ರ ಬಡ್ಡಿಯಲ್ಲಿ ರಿಯಾಯಿತಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಸಲು ಮಾತ್ರ ಕಟ್ಟುತ್ತೇವೆ, ಎಲ್ಲ ರೀತಿಯ ಬಡ್ಡಿ ಮನ್ನಾ ಮಾಡಬೇಕು ಎಂದು ಪಟ್ಟು ಹಿಡಿದರು. ಇದು ಬ್ಯಾಂಕ್‌ನ ಕೇಂದ್ರ ಕಚೇರಿ ತೀರ್ಮಾನ ಎಂದು ಅಧಿಕಾರಿಗಳು ಹೇಳಿದ್ದರಿಂದ ಕೋಪಗೊಂಡು ಪ್ರತಿಭಟಿಸಿದರು.

ಕೇಂದ್ರದ ಯುಪಿಎ ಸರ್ಕಾರ ಮತ್ತು ರಾಜ್ಯದಲ್ಲಿ ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ನಡೆದ ಸಾಲಮನ್ನಾದಲ್ಲಿ ಈ ಬ್ಯಾಂಕ್‌ನ ರೈತರ ಬೆಳೆ ಸಾಲ ಮನ್ನಾ ಆಗಿಲ್ಲ. ಹೀಗಾಗಿ ಸಾಲದ ಹಣ ದುಪ್ಪಟ್ಟಾಗಿದೆ. ಕಳೆದ ವರ್ಷದಿಂದ ಕೋವಿಡ್ ಸಮಸ್ಯೆಯಲ್ಲೂ ಜನ ನರಳಿದ್ದಾರೆ. ಆರ್ಥಿಕ ಮೂಲ ಇಲ್ಲದೆ ಜೀವನವೇ ಕಷ್ಟವಾಗಿರುವ ಸನ್ನಿವೇಶದಲ್ಲಿ ಅಸಲು ಕಟ್ಟಿಸಿಕೊಂಡು ಋಣಮುಕ್ತ ಪತ್ರ ನೀಡಬೇಕು.

ಮೇಲಿನ ಅಧಿಕಾರಿಗಳು ರೈತರಿಗೆ ನೆರವಾಗಬೇಕು ಎಂದು ಬನ್ನಿಕುಪ್ಪೆ ಶಂಕರ್, ಶ್ರೀನಿವಾಸ್, ಕೆಂಪೇಗೌಡ, ಲಕ್ಕೋಜನಹಳ್ಳಿ ನಾಗರಾಜು, ಸಂತೋಷ್, ತೆಂಗಿನಕಲ್ಲು ಕೃಷ್ಣೇಗೌಡ, ಕಾಡನಕುಪ್ಪೆ ಸ್ವಾಮಿ, ಕವಣಾಪುರ ಶಿವಮಲ್ಲಯ್ಯ, ಅಂಕನಹಳ್ಳಿ ಶಿವಕುಮಾರ್, ಪಾರ್ಥಸಾರಥಿ, ವೆಂಕಟಾಚಲಯ್ಯ, ಹನುಮಯ್ಯ, ಸುರೇಶ್ ಮುಂತಾದವರು ಆಗ್ರಹಿಸಿದರು.

ರೈತರು ಮಳೆ, ಬೆಲೆ, ವಾತಾವರಣ ಬದಲಾವಣೆ, ಫಸಲು ನಷ್ಟ ಮುಂತಾದ ಅನೇಕ ಸಮಸ್ಯೆಗಳಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಾ ಬಂದಿದ್ದಾರೆ. ಈ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರಿಗೆ ಸಾಲಮನ್ನಾ ಭಾಗ್ಯ ಸಿಕ್ಕಿಲ್ಲ. ಬೇರೆ ಬ್ಯಾಂಕುಗಳು ಅಸಲಿನಲ್ಲೂ ಕೂಡ ಕಡಿಮೆ ಮಾಡಿವೆ.ಆದರೆ ಈ ಬ್ಯಾಂಕು ಬಡ್ಡಿಯಲ್ಲಿ ಕೊಂಚ ಕಡಿಮೆ ಎನ್ನುತ್ತಿದೆ. ಇದರಿಂದ ತೀವ್ರ ತೊಂದರೆಯಲ್ಲಿರುವ ರೈತರಿಗೆ ಬ್ಯಾಂಕು ಸಹಕಾರ ನೀಡುತ್ತಿಲ್ಲ. ಬ್ಯಾಂಕು ಅಸಲು ಮಾತ್ರ ಕಟ್ಟಿಸಿಕೊಂಡು ರೈತರಿಗೆ ಋಣಮುಕ್ತ ಪತ್ರ ನೀಡಬೇಕು. ದೊರೆಸ್ವಾಮಿ ಎಪಿಎಂಸಿ ಮಾಜಿ ಅಧ್ಯಕ್ಷ, ಲಕ್ಕೋಜನಹಳ್ಳಿ ರೈತರಿಗೆ ನೋಟಿಸ್ ನೀಡಿ ಅದಾಲತ್‌ನಲ್ಲಿ ಭಾಗವಹಿಸಿ ಸಾಲದ ಮೇಲಿನ ಬಡ್ಡಿಯಲ್ಲಿ ರಿಯಾಯಿತಿ ಪಡೆಯುವಂತೆ ತಿಳಿಸಲಾಗಿತ್ತು. ರೈತರು ಬ್ಯಾಂಕಿನ ನಿಯಮಗಳಿಗೆ ಒಪ್ಪುತ್ತಿಲ್ಲ. ಇದರಿಂದ ಸಮಸ್ಯೆ ಉಂಟಾಗಿದೆ. ಅಸಲು ಮಾತ್ರ ಕಟ್ಟುತ್ತೇವೆ ಎನ್ನುತ್ತಿದ್ದಾರೆ. ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅಭಯ್ ಬ್ಯಾಂಕ್ ಅಧಿಕಾರಿ, ಮಂಡ್ಯ ಶಾಖೆ