ನ್ಯೂಸ್

ಅಸಮರ್ಪಕ ವಿದ್ಯುತ್ ಲೋಡ್ ಶೆಡ್ಡಿಂಗ್ ವಿರುದ್ಧ ಬೆಸ್ಕಾಂ ಕಛೇರಿ ಮುಂದೆ ಕೆ.ಪಿ.ಆರ್.ಎಸ್ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೃಷಿ, ನೀರಾವರಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡದ ಬೆಸ್ಕಾಂ ಅಧಿಕಾರಿಗಳ ವಿರೋಧಿ ಧೋರಣೆಯನ್ನು ಖಂಡಿಸಿ ಹಾಗೂ ರೈತರಿಗೆ ೧೦ ಗಂಟೆಗಳ ವಿದ್ಯುತ್ ನೀಡುವಂತೆ ಒತ್ತಾಯಿಸಿ ಕೆ.ಪಿ.ಆರ್.ಎಸ್ ತಾಲೂಕು ಸಮಿತಿ ವತಿಯಿಂದ ಬುಧವಾರ ನಗರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕೆ.ಪಿ.ಆರ್.ಎಸ್ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ, ಜಿಲ್ಲೆಯಾದ್ಯಂತ ರೈತರು ಅಂತರ್ಜಲವನ್ನು ನಂಬಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸಮರ್ಪಕವಾಗಿ ವಿದ್ಯುತ್ ನೀಡದೆ ರೈತರು ಅಪಾರವಾದ ನಷ್ಟವನ್ನು ಅನುಭವಿಸುವಂತೆ ಮಾಡಿದ್ದಾರೆ. ಕೂಡಲೇ ಸರ್ಕಾರ ಮತ್ತು ಅಧಿಕಾರಿಗಳು ರೈತರ ಚಟುವಟಿಕೆಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಮುಂಗಾರು ಮಳೆಯ ಅಭಾವದ ನೆಪದಲ್ಲಿ ಬೆಸ್ಕಾಂ ಅಧಿಕಾರಿಗಳು ಕೃಷಿ ಚಟುವಟಿಕೆಗಳಿಗೆ ತೊಂದರೆ ಕೊಡಬಾರದು. ಅಗತ್ಯವಿರುವ ೧೦ ತಾಸುಗಳ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಕೆ.ಪಿ.ಆರ್.ಎಸ್ ತಾಲೂಕು ಅಧ್ಯಕ್ಷ ಅಲಹಳ್ಳಿ ವೆಂಕಟೇಶಪ್ಪ ಮಾತನಾಡಿ, ಸರ್ಕಾರ ಕೂಡಲೇ ಮನೆ ಮತ್ತು ಕೃಷಿ ಪಂಪ್ ಸೆಟ್ ಗಳಿಗೆ ಡಿಜಿಟಲ್ ಪ್ರಿಪೇಯ್ಡ್ ಮೀಟರ್ ಹಾಕುವ ಪದ್ದತಿ ಕೈಬಿಡಬೇಕು, ಕೃಷಿ ಪಂಪ್ ಸೆಟ್ ನ ಆರ್.ಆರ್ ನಂಬರ್ ಗೆ ರೈತರ ಆಧಾರ್ ಜೋಡಣೆಯನ್ನು ಕೈಬಿಟ್ಟು ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣ ಗೊಳಿಸುವ ೨೦೨೨ ಕಾಯಿದೆ ಅಂಗೀಕರಿಸಿದ ಕೇಂದ್ರ ಸರ್ಕಾರದ ಕಾಯ್ದೆಯನ್ನು ವಾಪಸ್ ಪಡೆಯಬೇಕು. ದಿನದ ೧೦ ಗಂಟೆಗಳ ಕಾಲ ೩ಫೇಸ್ ವಿದ್ಯುತ್ ಕಡ್ಡಾಯವಾಗಿ ನೀಡಬೇಕೆಂದು ಒತ್ತಾಯಿಸಿದರು.

ನಿರಂತರ ಜ್ಯೋತಿ ಮತ್ತು ತೋಟದ ಮನೆಗಳಿಗೆ ಸಂಜೆ ೬ರಿಂದ ರಾತ್ರಿ ೧೦ ಗಂಟೆ ತನಕ ಲೋಡ್ ಶೆಡ್ಡಿಂಗ್ ಇಲ್ಲದೆ ವಿದ್ಯುತ್ ನೀಡಬೇಕು. ರಾಜ್ಯದಲ್ಲಿ ಕೊರತೆ ಇರುವ ೬ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಟ್ರಾನ್ಸ್ಫಾರ್ಮರ್ ಸುಟ್ಟು ಹೋದರೆ ೭೨ ಗಂಟೆಗಳೊಳಗಾಗಿ ಇಲಾಖೆಯೇ ಖದ್ದು ಜವಾಬ್ದಾರಿ ವಹಿಸಿ ಹೊಸ ಟ್ರಾನ್ಸ್ ಪಾರ್ಮರ್ ನೀಡಬೇಕೆಂಬ ನಿಯಮವಿದ್ದರು, ಇಲಾಖೆಯವರು ಪಾಲಿಸುತ್ತಿಲ್ಲ. ಕೂಡಲೇ ಈ ನಿಯಮವನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯ ನೇತೃತ್ವವನ್ನು ಕೆ.ಪಿ.ಆರ್.ಎಸ್ ತಾಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಉಪಾಧ್ಯಕ್ಷರಾದ ಎನ್.ಎನ್ ಶ್ರೀರಾಮ್, ಟಿ.ಕೃಷ್ಣೇಗೌಡ ಸಹಕಾರ್ಯದರ್ಶಿ ಸುಗಟೂರು ಶ್ರೀಧರ್ ರೆಡ್ಡಿ, ಮುಖಂಡರಾದ ಮುನಿರತ್ನಮ್ಮ, ವೀರೇಗೌಡ, ನಾರಾಯಣಸ್ವಾಮಿ, ನಾರಾಯಣಪ್ಪ, ಸಿಎಲ್.ನಾಗರಾಜ್, ವೆಂಕಟೇಶ್, ಶ್ರೀನಿವಾಸ್, ದಿಂಬ ನಾರಾಯಣಪ್ಪ ಮುಂತಾದವರು ವಹಿಸಿದ್ದರು.

ಚಿತ್ರ ೦೬ ಕೆಎಲ್‌ಆರ್. ೦೧ : ಅಸಮರ್ಪಕ ವಿದ್ಯುತ್ ಸರಬರಾಜನ್ನು ಖಂಡಿಸಿ ಕೆ.ಪಿ.ಆರ್.ಎಸ್. ವತಿಯಿಂದ ಬೆಸ್ಕಾಂ ಇಲಾಖೆ ಮುಂದೆ ಪ್ರತಿಭಟನೆ ನಡೆಸುತ್ತಿರುವುದು.