ಲಿಂಗದಹಳ್ಳಿ ಹೋಬಳಿಯ ಜೈಪುರ ಗ್ರಾಮದ ಬಳಿ ಜಲಜೀವನ್ ಮಿಷನ್ ಯೋಜನೆಗಾಗಿ ಪೈಪ್‌ಲೈನ್ ಅಳವಡಿಸಲು ಸೇತುವೆ ಬದಿಯ ತಡೆಗೋಡೆಗಳನ್ನು ಜೆಸಿಬಿಯಿಂದ ಅಗೆದು ಹಾಗೆಯೇ ಬಿಟ್ಟಿರುವುದು. 
ನ್ಯೂಸ್

ಅವೈಜ್ಞಾನಿಕ ಕಾಮಗಾರಿಯಿಂದ ಸಂಚಾರ ದುಸ್ತರ

ಲಿಂಗದಹಳ್ಳಿ: ಜಲಜೀವನ್ ಮಿಷನ್ ಯೋಜನೆಯ ಕೆಲಸಗಳು ಲಿಂಗದಹಳ್ಳಿ ಹೋಬಳಿಯಾದ್ಯಂತ ಭರದಿಂದ ಸಾಗುತ್ತಿದೆ. ಪೈಪ್‌ಲೈನ್ ಅಳವಡಿಸಲು ಸಂಬಂಧಪಟ್ಟ ಇಲಾಖೆಯವರು ರಸ್ತೆಗಳ ಅಂಚಿನಲ್ಲೇ ಜೆಸಿಬಿ ಮೂಲಕ ಗುಂಡಿ ಅಗೆದಿದ್ದು ಇದರಿಂದ ಗ್ರಾಮಸ್ಥರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಶ್ರಯದಲ್ಲಿ ಕೈಗೆತ್ತಿಕೊಂಡಿರುವ ಮನೆ ಮನೆಗೂ ಕುಡಿಯುವ ನೀರನ್ನೊದಗಿಸುವ ಜಲಜೀವನ್ ಯೋಜನೆಗಾಗಿ ಭದ್ರಾ ಮೇಲ್ದಂಡೆ ಲಕ್ಕವಳ್ಳಿ ಬಳಿಯಿಂದ ಪೈಪ್‌ಲೈನ್‌ಗಳನ್ನು ಅಳವಡಿಸಲಾಗುತ್ತಿದೆ.

ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕವೇ ಲಿಂಗದಹಳ್ಳಿ ಹೋಬಳಿಯ ಬಹುತೇಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಪೈಪ್‌ಲೈನ್ ಅಳವಡಿಸಲು ಕಿರಿದಾದ ಅನೇಕ ರಸ್ತೆಯ ಒಂದು ಬದಿಯಲ್ಲಿ ಗುಂಡಿ ತೆಗೆಯಲಾಗಿದೆ. ಅದರೊಂದಿಗೆ ಈಗ ಕುಡಿಯುವ ನೀರಿನ ಯೋಜನೆಗಾಗಿ ರಸ್ತೆಯ ಮತ್ತೊಂದು ಬದಿಯಲ್ಲೂ ಗುಂಡಿ ಅಗೆದಿರುವುದರಿಂದ ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಅಪಾಯಕ್ಕೆ ಆಹ್ವಾನ: ಸ್ವಲ್ಪ ಮಳೆ ಬಂದರೂ ಪೈಪ್‌ಲೈನ್‌ಗಳನ್ನು ಅಳವಡಿಸಲು ತೆಗೆದಿರುವ ಗುಂಡಿಯೊಳಗೆ ಮಳೆಯ ನೀರು ಹೋಗಿ ಕೆಸರಾಗುವುದರಿಂದ ವಾಹನ ಚಾಲಕರು ಈ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಇತ್ತೀಚೆಗೆ ನಂದಿ ಹೊಸಳ್ಳಿ ಗ್ರಾಮದಲ್ಲಿ ಟ್ರಾೃಕ್ಟರ್ ಒಂದು ಗುಂಡಿಯೊಳಗೆ ಇಳಿದು ಟ್ರಾೃಕ್ಟರ್‌ನಲ್ಲಿದ್ದ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಜನ ಮತ್ತು ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸಮರ್ಪಕವಾಗಿ ಕಾಮಗಾರಿ ಕೈಗೊಳ್ಳಬೇಕು ಎಂದು ನಂದಿಬಟ್ಲು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಪಿ.ಕೃಷ್ಣೇಗೌಡ ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.