ಸಾಲ ವಸೂಲಾತಿಗೆ ಕೆಲ ಸಂಸ್ಥೆಗಳು ಬೆದರಿಕೆ ತಂತ್ರವನ್ನು ಬಳಸಲಾಗುತ್ತಿದೆ ಇದನ್ನು ಸಹಿಸಲಾಗುವುದಿಲ್ಲ / ಜಿಲ್ಲಾಧಿಕಾರಿ ಎಂ.ಆರ್.ರವಿ ಎಚ್ಚರಿಕೆ
ವಿಜಯವಾಣಿ ಸುದ್ದಿಜಾಲ ಕೋಲಾರ
ಸಾಲ ಮಾಡುವಾಗ ಅನಗತ್ಯವಾಗಿ ಸಾಲ ಸಿಗುವುದೆಂಬ ಆಸೆಯ ಮೇಲೆ ಸಾಲ ಪಡೆಯುವುದು, ಸಾರ್ವಜನಿಕ ಆರ್ಥಿಕ ಜೀವನಕ್ಕೆ ಮಾರಕ. ಬದಲಾಗಿ ಅವಶ್ಯಕತೆಗೆ ಅನುಗುಣವಾಗಿ ವಿವೇಚನೆಯಿಂದ ಸಾಲ ಪಡೆದು ನಿಗದಿತ ಅವಧಿಯೊಳಗೆ ಕಂತುಗಳನ್ನು ತುಂಬಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್.ರವಿ ಅವರು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಖಾಸಗಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮುಖ್ಯ ಮಂತ್ರಿಗಳ ಆದೇಶದ ಮೇರೆಗೆ ಜಿಲ್ಲೆಯ ಎಲ್ಲಾ ಖಾಸಗಿ ಹಣಕಾಸು ಸಂಸ್ಥೆಗಳ ಮುಖ್ಯಸ್ಥರು ತಮ್ಮ ಸಂಸ್ಥೆಗಳ ಖಾತೆದಾರರ ಹಾಗೂ ಸಾಲಗಾರರ ವಿವರಗಳನ್ನು ಕೂಡಲೇ ಜಿಲ್ಲಾ ಸಹಕಾರ ಸಂಘಗಳ ಉಪನಿಬಂದಕರಿಗೆ ನೀಡಬೇಕು ಎಂದು ಸೂಚಿಸಿದರು.
ಹಣಕಾಸು ಚಟುವಟಿಕೆಗಳು ನ್ಯಾಯಯುತವಾಗಿದ್ದಲ್ಲಿ ಸರ್ಕಾರವು ಯಾವುದೇ ವ್ಯವಹಾರ ನಡೆಸಲು ಅಡ್ಡಿ ಪಡಿಸುವುದಿಲ್ಲ. ಹಣಕಾಸು ಸಂಸ್ಥೆಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯವ್ಯಾಪ್ತಿಯಲ್ಲೇ ಕಾರ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಜನರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಂದರ್ಭ ಉದ್ಭವಿಸಬಾರದು. ಹಣಕಾಸಿನ ವ್ಯಹಾರಗಳಲ್ಲಿ ಪಾರದರ್ಶಕತೆ ಇರಬೇಕು. ಸಾರ್ವಜನಿಕರು ಸಹ ತಮ್ಮ ಕೊಳ್ಳುಬಾಕ ಮನಸ್ಥಿತಿಯನ್ನು ನಿಯಂತ್ರಣ ಮಾಡಿಕೊಳ್ಳಬೇಕು. ಹಣಕಾಸು ಸಂಸ್ಥೆಗಳು ಇದನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದರು.
ಸAಸ್ಥೆಗಳು ಹಣಕಾಸು ವ್ಯವಹಾರ ಮಾಡುವಾಗ ಆರ್.ಬಿ.ಐ ನ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು. ವ್ಯಕ್ತಿಯ ಸಾಲ ಪಡೆಯುವ ಸಾಮರ್ಥ್ಯಕ್ಕಿಂತ ಹೆಚ್ಚಿಗೆ ಸಾಲ ನೀಡಬಾರದು, ಒಬ್ಬನೇ ವ್ಯಕ್ತಿಯ ಬೇರೆ ಬೇರೆ ಸಂಸ್ಥೆಗಳಲ್ಲಿ ಸಾಲ ಪಡೆಯುವುದು ರೂಡಿಯಲ್ಲಿದೆ. ಇದನ್ನು ಹಣಕಾಸು ಸಂಸ್ಥೆಗಳ ಆಂತರಿಕ ಸಮನ್ವಯತೆಯಿಂದ ಕಟ್ಟುನಿಟ್ಟಾಗಿ ಪರಿಶೀಲಿಸಿ ಸಾಲ ಮಂಜೂರು ಮಾಡುವ ಬಗ್ಗೆ ಚಿಂತಿಸಬೇಕು. ಆರ್.ಬಿ. ಐ. ನ ನಿರ್ದೇಶನದಂತೆ ಮೂರು ಸಂಸ್ಥೆಗಳಲ್ಲಿ ಏಕಕಾಲಕ್ಕೆ ಸಾಲ ಪಡೆಯಲು ಅವಕಾಶ ನೀಡಲಾಗಿದೆ ಎಂದರು.
ಸಾಲ ವಸೂಲಾತಿ ಪದ್ಧತಿಗಳನ್ನು ಆರ್.ಬಿ. ಐ ನಿರ್ದೇಶನದ ಮೇರೆಗೆ ಅಳವಡಿಸಿಕೊಳ್ಳಬೇಕು. ಸಂಸ್ಥೆಯ ಇಚ್ಛಾನುಸಾರ ಮನಬಂದAತೆ ವಸೂಲಿಗೆ ಹೋಗುವಂತಿಲ್ಲ. ಕಚೇರಿ ವೇಳೆಯಲ್ಲಿ ಮಾತ್ರ ಸಾಲಗಾರರಿಗೆ ದೂರವಾಣಿ ಕರೆ ಮಾಡಿ ಸಾಲ ವಸೂಲತಿಗೆ ಹೋಗಬಹುದಾಗಿದೆ. ಅಕ್ರಮವಾಗಿ ಹಾಗೂ ಕಾನೂನು ವಿರುದ್ಧವಾಗಿ ಸಾಲ ವಸೂಲಿಗೆ ಇಳಿದು ಕಿರುಕುಳ ನೀಡುವ ಮೈಕ್ರೋ ಪೈನಾನ್ಸ್ ಗಳ ವಿರುದ್ಧ ಸುಮೋಟೋ ದೂರು ದಾಖಲು ಮಾಡಲಾಗುವುದು. ಈ ರೀತಿ ಯಾವುದೇ ಸಂಸ್ಥೆ ಕಿರುಕುಳ ನೀಡಿದಲ್ಲಿ ಪೊಲೀಸ್ ಇಲಾಖೆಯಲ್ಲಿ ಸಾರ್ವಜನಿಕರು ಸಹ ದೂರು ದಾಖಲಿಸಬಹುದಾಗಿದೆ. ಜನರು ದೂರು ನೀಡಿದ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಾಲ ವಸೂಲಾತಿಗೆ ಕೆಲ ಸಂಸ್ಥೆಗಳು ಬೆದರಿಕೆ ತಂತ್ರವನ್ನು ಬಳಸಲಾಗುತ್ತಿದೆ. ಇದನ್ನು ಸಹಿಸಲಾಗುವುದಿಲ್ಲ. ಸಾಲ ನೀಡುವಾಗ ಪಾರದರ್ಶಕತೆಯಿಂದ ಎಲ್ಲಾ ಕಾನೂನುಗಳನ್ನು ಸಾಲಗಾರರಿಗೆ ಸ್ಪಷ್ಟವಾಗಿ ತಿಳಿಸಬೇಕು. ಕಾನೂನು ಬದ್ದವಲ್ಲದ ವಸೂಲಾತಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ . ಬಿ ನಿಖಿಲ್ ಅವರು ಮಾತನಾಡಿ ನೋಂದಣಿ ಆಗಿರುವ ಮತ್ತು ಆಗದಿರುವ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಕಿರುಕುಳ ನೀಡುತ್ತಿರುವುದು ಇತ್ತೀಚಿಗೆ ಹೆಚ್ಚಾಗಿ ಕಂಡು ಬರುತ್ತಿದೆ. ಗಿರವಿದರರು ಸಹ ಸಾಲ ನೀಡುತ್ತಿದ್ದು ಈ ಮೂಲಕ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಹೋಗುವಾಗ ಕಾನೂನು ಬದ್ಧವಾಗಿ ಜಪ್ತಿಗಾಗಿ ಮೊದಲು ನೋಟಿಸ್ ನೀಡಿ ಆ ನಂತರ ಕ್ರಮ ಕೈಗೊಳ್ಳಬೇಕು. ಏಕಾಏಕಿ ಜಪ್ತಿ ಮಾಡಿದರೆ ಪೊಲೀಸ್ ಇಲಾಖೆಯು ಅಂತಹವರ ವಿರುದ್ಧ ಸ್ವಯಂ ದೂರು ದಾಖಲಿಸಿಕೊಳ್ಳುತ್ತಾರೆ ಎಂದರು.
ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿ ತಂಡದಲ್ಲಿ ಕಾರ್ಯನಿರ್ವಹಿಸುವವರ ವೈಯಕ್ತಿಕ ವಿವರಗಳನ್ನು ಪೊಲೀಸ್ ಇಲಾಖೆಯಲ್ಲಿ ಪರಿಶೀಲಿಸಿಕೊಳ್ಳಬೇಕು. ಸಂಸ್ಥೆಯು ಸಹ ಮುನ್ನೆಚ್ಚರಿಕೆಯಾಗಿ ಅವರ ವಿವರಗಳನ್ನು ಕ್ರಿಮಿನಲ್ ಹಿನ್ನೆಲೆಯನ್ನು ಪರಿಶೀಲಿಸಿ ಅವರನ್ನು ನೇಮಕ ಮಾಡಿಕೊಳ್ಳಬೇಕು. ನೇಮಕ ಮಾಡಿದ ನಂತರ ಅವರಿಗೆ ಸೂಕ್ತ ತರಬೇತಿ ನೀಡಿ ಸಲಹೆ ಸೂಚನೆಗಳನ್ನು ನೀಡಿ ಕ್ಷೇತ್ರದಲ್ಲಿ ವಸೂಲಾತಿಗೆ ಕಳುಹಿಸಬೇಕು ಎಂದರು.
ಹಣಕಾಸು ಸಂಸ್ಥೆಗಳಳಿಗೆ ಅರಿವು ಮೂಡಿಸುವುದು ಈ ಸಭೆಯ ಉದ್ದೇಶವಾಗಿದೆ. ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಹ ಕಟ್ಟುನಿಟ್ಟಾಗಿ ಆರ್.ಬಿ. ಐ ನಿರ್ದೇಶನಗಳನ್ನು ಪಾಲಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾದರೆ ಸಹಿಸುವುದಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂದಕರಾದ ಕಿಶೋರ್, ಸಹಾಯಕ ನಿಬಂಧಕರು ನವೀನ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಸುಬ್ಬಾ ನಾಯಕ್, ಶೀಲಾ ,ಲೀಡ್ ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಸೇರಿದರೆ ಮತ್ತಿತರರು ಹಾಜಾರಿದ್ದರು.
ಚಿತ್ರ ೨೯ ಕೆ.ಎಲ್.ಆರ್. ೦೧ : ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಖಾಸಗಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ಎಸ್.ಪಿ.ಬಿ.ನಿಖಿಲ್ ಮುಂತಾದವರಿದ್ದರು.