ನ್ಯೂಸ್

ಅವನತಿಯತ್ತ ಕಾಂಗ್ರೆಸ್, ಜೆಡಿಎಸ್ ಮುಳುಗುತ್ತಿರುವ ಹಡಗು: ಕೇಂದ್ರ ಸಚಿವ ಡಿವಿಎಸ್ ವ್ಯಂಗ್ಯ

ಕೋಲಾರ
ರಾಜ್ಯದಲ್ಲಿನ ಕಾಂಗ್ರೆಸ್ ಅವನತಿಯತ್ತ ಸಾಗಿವೆ. ಜೆಡಿಎಸ್ ಮುಳುಗುತ್ತಿರುವ ಹಡಗು, ಎರಡು ಕ್ಷೇತ್ರಗಳ ಉಪಚುನಾವಣೆ, ವಿಧಾನಪರಿಷತ್‍ಮನ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಲಾರ ನಗರ ಹೊರವಲಯದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಚಿದಾನಂದ್ ಎಂ.ಗೌಡ ಪರವಾಗಿ ಬಿಜೆಪಿಯಿಂದ ಆಯೋಜಿಸಿದ್ದ ಪ್ರಚಾರ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಆಂತರಿಕ ಕಚ್ಚಾಟವಿದೆ. ಜೆಡಿಎಸ್ ಮುಳುಗುತ್ತಿರುವ ಹಡಗು. ಜನ ಬಿಜೆಪಿ ಕಡೆ ಒಲವು ಹೊಂದಿರುವುದರಿಂದ ಗೆಲುವು ನಿಶ್ಚಿತ ಎಂದರು
ಮೈತ್ರಿ ಸರ್ಕಾರದಲ್ಲಿ ಕುಸಿದಿದಿದ್ದ ಆಡಳಿತವನ್ನು ಕೋವಿಡ್ ನಡುವೆಯೂ ಸಿಎಂ ಯಡಿಯೂರಪ್ಪ ತಹಬಂದಿಗೆ ತಂದು ಪುನಶ್ಚೇತನ ನೀಡಿರುವುದು ಈ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಹಾದಿ ಮತ್ತಷ್ಟು ಸುಗಮ ಮಾಡಿದೆ ಎಂದು ನುಡಿದರು.
ವಿಷಬೀಜ ಬೇಡ
ರಾಜಕಾರಣದಲ್ಲಿ ಅಧಿಕಾರದ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ, ಆದರೆ ಸಂಘಟನೆಯಲ್ಲಿ ಕೆಲಸ ಮಾಡುವಾಗ ಬಹಿರಂಗ ಹೇಳಿಕೆ ನೀಡದೇ ಒಂದೇ ದೃಷ್ಟಿಕೋನದಿಂದ ಸಾಗಬೇಕು. ಉತ್ತರ ಕರ್ನಾಟಕದ ಸಿಎಂ ಎಂಬ ವಿಷ ಬೀಜ ಬಿತ್ತುವ ಪ್ರಯತ್ನ ಖಂಡನೀಯ.ಯಡಿಯೂರಪ್ಪ ಉತ್ತರ ಕರ್ನಾಟಕ ಅಭಿವೃದ್ದಿಗೆ ಅಪಾರ ಕಾಳಜಿ ತೋರಿದ್ದಾರೆ ಎಂದು ಯತ್ನಾಳ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು
ಸಿದ್ದರಾಮಯ್ಯಗೆ ಕೋವಿಡ್ ಅನುಭವ
ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲ ಎಂಬ ಸಿದ್ದರಾಮಯ್ಯ ಟೀಕೆಗೆ ವ್ಯಂಗ್ಯವಾಗಿ ಉತ್ತರಿಸಿದ ಸದಾನಂದಗೌಡ ಅವರು ಅವರಿಗೆ ಕೋವಿಡ್ ಬಂದು ಅನುಭವವಾಗಿದೆ. ಭಾರತದ ಜನಸಂಖ್ಯೆ, ಬೇರೆ ದೇಶಗಳ ಜನಸಂಖ್ಯೆ ಎಷ್ಟು ಎಂದು ತಿಳಿದುಕೊಳ್ಳಲಿ, ನಮ್ಮಲ್ಲಿ ಅತ್ಯಂತ ಕಡಿಮೆ ಸಾವಿನ ಪ್ರಮಾಣವಿದೆ, ಔಷಧಿ ಕೊರತೆಯಾಗಿಲ್ಲ, ಇದೀಗ ಸೋಂಕಿತರ ಸಂಖ್ಯೆ ದಿನಕ್ಕೆ 50 ಸಾವಿರಕ್ಕಿಂತ ಕಡಿಮೆಯಾಗಿದೆ, ಹತೋಟಿಗೆ ಬರುತ್ತಿದೆ ಎಂದು ತಿಳಿಸಿದರು.
ಆತ್ಮಾವಲೋಕನ ಮಾಡಿಕೊಳ್ಳಲಿ
ಉಪಮುಖ್ಯಮಂತ್ರಿ ಅಶ್ವಥ್ಥನಾರಾಯಣ ಮಾತನಾಡಿ ಸಾರ್ವಜನಿಕ ಜೀವನದಲ್ಲಿ ಆಪಾದನೆ, ಪ್ರಶ್ನೆ ಕೇಳಿದಾಗ ಉತ್ತರಿಸಬೇಕು, ಅವನ್ಯಾರು ಎನ್ನುವ ಅವರ ಡಿಕೆಶಿ, ಡಿಕೆ.ಸುರೇಶ್‍ರ ನಡವಳಿಕೆ ಎಷ್ಟು ಸರಿ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿವಿ ಮಾತು ಹೇಳಿದರಲ್ಲದೆ ನಾನು ಯಾರೋ, ಅವರು ದೊಡ್ಡವರು ಬಿಡಿ, ಆದರೆ ನನ್ನ ಪ್ರಶ್ನೆಗೆ ಉತ್ತರಿಸಲಿ ಎಂದರು.
ರಾಜರಾಜೇಶ್ವರಿ ನಗರದಲ್ಲಿ ನಕಲಿ ಮತದಾರರ ಸೂತ್ರಧಾರರೂ ಅವರೇ. ಇದೀಗ ಸುಪ್ರೀಂ ಕೋರ್ಟ್ ನಕಲಿ ಐಟಿ ಕೇಸ್ ಡಿಸ್‍ಮಿಸ್ ಮಾಡಿದ ನಂತರ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಇವರಿಗೆ ತಿಳುವಳಿಕೆ ಇಲ್ಲವೇ ? ಮತ್ತೆ ಅದೇ ನಕಲಿ ಓಟರ್ ಐಡಿ ಸ್ಕ್ಯಾಂಡಲ್ ಬಗ್ಗೆ ಅವರೇ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇವರು ಕಾನೂನು ಉಲ್ಲಂಘನೆ ಮಾಡಬಹುದು ಆದರೆ ಬೇರೆಯವರು ಮಾಡಿದರೆ ಮಾತ್ರ ತಪ್ಪು ಎಂದು ಟೀಕಿಸಿದರು.
ಚುನಾವಣಾ ಪ್ರಚಾರ ಸಭೆಯಲ್ಲಿ ಸಂಸದ ಎಸ್. ಮುನಿಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್, ಆರೋಗ್ಯ ಸಚಿವ ಡಾ. ಸುಧಾಕರ್, ಎಮ್ಮೆಲ್ಸಿ ವೈ.ಎ. ನಾರಾಯಣಸ್ವಾಮಿ, ಬಿಜೆಪಿ ಅಭ್ಯರ್ಥಿ ಚಿದಾನಂದ್ ಎಂ.ಗೌಡ ಇತರರಿದ್ದರು.

ಕೋಲಾರ ನಗರ ಹೊರವಲಯದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಚಿದಾನಂದ್ ಎಂ.ಗೌಡ ಪರವಾಗಿ ಬಿಜೆಪಿಯಿಂದ ಆಯೋಜಿಸಿದ್ದ ಪ್ರಚಾರ ಸಭೆಯನ್ನು ಚಿವ ಡಿ.ವಿ. ಸದಾನಂದಗೌಡ ಉದ್ಘಾಟಿಸಿದರು. ಡಿಸಿಎಂ ಅಶ್ವತ್ಥನಾರಾಯಣ್, ಸಚಿವರಾದ ಸುಧಾಕರ್, ಎಚ್. ನಾಗೇಶ್, ಸಂಸದ ಮುನಿಸ್ವಾಮಿ ಇತರರಿದ್ದರು