ರಾಮನಗರ : ಒಳಿತಿಗಾಗಿ ಪ್ರಾರ್ಥಿಸಿ ಪ್ರತಿವರ್ಷ ನಡೆಯುವ ಕೊಂಡೋತ್ಸವಗಳು ಅವಘಡಗಳಿಗೆ ಆಹ್ವಾನ ನೀಡುತ್ತಿದ್ದು, ಸಾಕಷ್ಟು ಅವಘಡಗಳು ನಡೆದರೂ ಜಿಲ್ಲಾಡಳಿತ ಮತ್ತು ಸಾರ್ವಜನಿಕರು ಎಚ್ಚೆತ್ತಂತೆ ಕಾಣುತ್ತಿಲ್ಲ.
ಜಿಲ್ಲೆಯ ಪ್ರಮುಖ ದೇವಾಲಯ ಹಾಗೂ ಗ್ರಾಮಗಳಲ್ಲಿ ಪ್ರತಿವರ್ಷ ಗ್ರಾಮದೇವತೆ ಹಬ್ಬದಲ್ಲಿ ಅಗ್ನಿ ಕೊಂಡೋತ್ಸವ ನಡೆಯುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆಚರಣೆ ವೇಳೆ ಎಚ್ಚರಿಕೆ ತಪ್ಪುತ್ತಿರುವ ಪರಿಣಾಮ ಕೊಂಡ ಹಾಯುವಾಗ ಅರ್ಚಕರು, ಭಕ್ತರು ಕೊಂಡದಲ್ಲಿ ಬಿದ್ದು ಗಾಯಗಳಿಗೆ ಒಳಗಾಗುತ್ತಿರುವ ಮತ್ತು ಕೆಲವರು ಪ್ರಾಣವನ್ನೂ ಕಳೆದುಕೊಂಡಿರುವ ಘಟನೆಗಳು ನಡೆದಿವೆ.
ಕಳೆದ ವರ್ಷ ಕರೊನಾ ಹಿನ್ನೆಲೆಯಲ್ಲಿ ಕೊಂಡೋತ್ಸವಗಳು ನಡೆದಿಲ್ಲ, ಆದರೆ 2021ರಲ್ಲಿ ಈಗಾಗಲೇ ಎರಡು ಪ್ರಕರಣಗಳು ವರದಿಯಾಗಿದ್ದು, ಮತ್ತಷ್ಟು ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಬೇಕಿದೆ.
ಘಟನೆಗಳಿಗೆ ಕಾರಣವೇನು?: ಕೊಂಡಕ್ಕಾಗಿ ಹೆಚ್ಚು ಸೌದೆ ಬಳಸುತ್ತಿರುವುದು ಅವಘಡಗಳಿಗೆ ಪ್ರಮುಖ ಕಾರಣವಾಗಿದೆ. ದೊಡ್ಡ ಗಾತ್ರದ ಮರದ ದಿಮ್ಮಿಗಳು ಅಥವಾ ಹಸಿ ಸೌದೆಗಳು ಸಂಪೂರ್ಣ ಸುಡದೇ ಇದ್ದಾಗ ಮತ್ತು ಇಂತಹ ಸೌದೆಗಳನ್ನು ಕೊಂಡ ಹಾಯುವ ಮುನ್ನ ಹೊರತೆಗೆಯದಿರುವುದು ಕೊಂಡ ಹಾಯುವವರು ಆಯತಪ್ಪಿ ಬೀಳಲು ಕಾರಣವಾಗಿದೆ.
ನಿಯಮವೇನಿದೆ?: ಯಾವುದೇ ದೇವಸ್ಥಾನ ಮತ್ತು ಊರ ಹಬ್ಬಗಳಲ್ಲಿ ಕೊಂಡೋತ್ಸವ ನಡೆಸಲು ಪೂರ್ವಾನುಮತಿ ಪಡೆಯಲೇಬೇಕಾದ ನಿಯಮ ಧಾರ್ಮಿಕ ದತ್ತಿ ಇಲಾಖೆಯಲ್ಲಿಲ್ಲ. ಸುರಕ್ಷತಾ ಕ್ರಮಗಳಾಗಿ ಆಂಬುಲೆನ್ಸ್, ವೈದ್ಯರ ನಿಯೋಜನೆ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕು ಎನ್ನುವ ಸೂಚನೆಗಳಿದ್ದರೂ ಪಾಲನೆಯಾಗುತ್ತಿಲ್ಲ.
ಇತ್ತೀಚೆಗೆ ಕೆಲವು ಘಟನೆಗಳು ನಡೆದ ನಂತರ ಸ್ಥಳೀಯ ಪೊಲೀಸರು ಸ್ಥಳಕ್ಕೆ ಹೋಗಿ ಭಕ್ತರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಧಾರ್ಮಿಕ ಆಚರಣೆಯೂ ಸಹ ಆಡಂಬರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಅವಘಡ ನಡೆಯುತ್ತಿರುವುದು ಕಂಡು ಬರುತ್ತಿದೆ.
ಕೊಂಡೋ ತ್ಸವದ ವೇಳೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಂಬಂಧ ಕೂಡಲೇ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಲಾಗುವುದು. ಹೆಚ್ಚಿನ ನಿಗಾ ವಹಿಸುವಂತೆ ನಿರ್ದೇಶನ ನೀಡಲಾಗುವುದು. ದಾಕ್ಷಾಯಣಿ ಉಪವಿಭಾಗಾಧಿಕಾರಿ, ರಾಮನಗರ