ನ್ಯೂಸ್

ಅರ್ಹತೆ ಕರಡು ನಿಯಮ ಪ್ರಕಟ; ಫಾರ್ಮಸಿ ಇನ್​ಸ್ಪೆಕ್ಟರ್ ನೇಮಕ, ಹೈಕೋರ್ಟ್​ಗೆ ಸರ್ಕಾರ ಮಾಹಿತಿ

ಬೆಂಗಳೂರು: ಫಾರ್ಮಸಿ ಇನ್​ಸ್ಪೆಕ್ಟರ್​ಗಳ ನೇಮಕಾತಿಗೆ ಅರ್ಹತೆ ನಿಗದಿಪಡಿಸಿ ಕರಡು ನಿಯಮಗಳನ್ನು ಪ್ರಕಟಿಸಲಾಗಿದ್ದು, ಮೂರು ದಿನಗಳ ಒಳಗೆ ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರ, ಹೈಕೋರ್ಟ್​ಗೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ‘ಫಾರ್ಮಸಿ ಕಾಯ್ದೆ-1948’ರ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೊಪ್ಪಳದ ಅಶೋಕ್ ಸ್ವಾಮಿ ಹೆರೂರು ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಗುರುವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲ ವಿಜಯ್ಕುಮಾರ್ ಎ. ಪಾಟೀಲ್ ಹಾಜರಾಗಿ, ಫಾರ್ಮಸಿ ಇನ್​ಸ್ಪೆಕ್ಟರ್​ಗಳ ನೇಮಕಾತಿಗೆ ಅರ್ಹತೆ ನಿಗದಿಪಡಿಸಿ ರೂಪಿಸಲಾಗಿದ್ದ ಕರಡು ನಿಯಮಗಳನ್ನು ಮಾ.2ರಂದು ಪ್ರಕಟಿಸಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಿ, ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾ ಗುವುದು. ಎಲ್ಲ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ನಿಯಮಗಳನ್ನು ಅಂತಿಮಗೊಳಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು. ಅದಕ್ಕಾಗಿ 3-4 ವಾರ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು. ಅದನ್ನು ಪರಿಗಣಿಸಿ ಸರ್ಕಾರಕ್ಕೆ 3 ವಾರ ಕಾಲಾವಕಾಶ ನೀಡಿದ ಪೀಠ, ಮುಂದಿನ ವಿಚಾರಣೆ ವೇಳೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಏ.4ಕ್ಕೆ ಮುಂದೂಡಿತು.

ಸಿಎಂ ಮುಂದಿಡಲು ಸೂಚಿಸಿದ್ದ ಪೀಠ: ಫಾರ್ಮಸಿ ಇನ್​ಸ್ಪೆಕ್ಟರ್​ಗಳ ನೇಮಕಾತಿಗೆ ಅರ್ಹತಾ ನಿಯಮ ರೂಪಿಸುವ ವಿಚಾರದಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಫೆ.14ರಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಸಂಬಂಧಪಟ್ಟ ಸಚಿವರನ್ನೇ ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತಲ್ಲದೆ, ಪ್ರಕರಣವನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿ, ಶೀಘ್ರ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿತ್ತು.