ಬೀರೂರಿನ ಸ್ನೇಹಕೂಟ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಲಾಗಿದ್ದ ಅರ್ಧನಾರೀಶ್ವರ ಗಣೇಶೋತ್ಸವದ ವಿಸರ್ಜನಾ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.  
ನ್ಯೂಸ್

ಅರ್ಧನಾರೀಶ್ವರ ಗಣೇಶನ ಅದ್ದೂರಿ ಮೆರವಣಿಗೆ

ಬೀರೂರು: ಕಳೆದ 25 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಅಶೋಕನಗರದ ಶ್ರೀರಾಮಮಂದಿರ ಭಜನೆಮನೆಯ ಸ್ನೇಹಕೂಟ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ್ದ ಅರ್ಧನಾರೀಶ್ವರ ಗಣೇಶನನ್ನು ಭಾನುವಾರ ಅದ್ದೂರಿ ಮೆರವಣಿಗೆಯೊಂದಿಗೆ ಸಮೀಪದ ಬಾಕಿನಕೆರೆಗೆ ವಿಸರ್ಜಿಸಲಾಯಿತು.

ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಮೂರ್ತಿಗೆ ಪ್ರತಿದಿನ ಪೂಜೆ, ಅಲಂಕಾರ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯುತ್ತಿತ್ತು. ಶನಿವಾರ ಸಾರ್ವಜನಿಕ ಅನ್ನಸಂತರ್ಪಣೆ ಆಯೋಜಿಸಿದ್ದು 7 ಸಾವಿರಕ್ಕೂ ಹೆಚ್ಚು ಜನ ಪ್ರಸಾದ ಸ್ವೀಕರಿಸಿದರು. ಭಾನುವಾರ ಪೂಜೆ, ಮಂಗಳಾರತಿ ನೆರವೇರಿದ ಬಳಿಕ ಸಂತೆ ಮಾರುಕಟ್ಟೆ ರಸ್ತೆಯ ಟ್ಯಾಂಕ್ ಬಳಿಯಲ್ಲಿ ಅಲಂಕರಿಸಲಾಗಿದ್ದ ವಾಹನಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ದಾರಿಯುದ್ದಕ್ಕೂ ಮಹಿಳೆಯರು ಹಣ್ಣು ಕಾಯಿ ಮಾಡಿಸಿದರು. ಮುಂಭಾಗದಲ್ಲಿ ಎರಡು ಡಿಜೆ, ಶ್ರೀರಾಮ ಪುತ್ಥಳಿಯೊಂದಿಗೆ ಹೊರಟ ಮೆರವಣಿಗೆಗೆ ಸಾವಿರಾರು ಜನರು ಸಾಕ್ಷಿಯಾದರು. ಬಿ.ಎಚ್.ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ಬಳಿ ಬಂದಾಗ ಇಡೀ ಪಟ್ಟಣದ ಜನತೆ ಬಂದು ಸೇರಿತು. ಡಿಜೆ ಸದ್ದಿಗೆ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು. ನಂತರ ಭಾರೀ ಮದ್ದುಗುಂಡಿನ ಪ್ರದರ್ಶನ ನಡೆಯಿತು. ನಂತರ ಲಿಂಗದಹಳ್ಳಿ ರಸ್ತೆಯ ಮೂಲಕ ಹೊರಟ ಮೆರವಣಿಗೆಗೆ ಅಕ್ಕಪಕ್ಕದಲ್ಲಿ ಕಿಕ್ಕಿರಿದು ನಿಂತ ಜನತೆ ಜೈಕಾರ ಕೂಗುತ್ತಾ ಭಗೀರಥ ವೃತ್ತದವರೆಗೂ ಸಾಗಿದರು. ಅಲ್ಲಿ ಪುನಃ ಪಟಾಕಿ ಸಿಡಿಸಿ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿದರು. ಜಿಲ್ಲೆಯಲ್ಲೇ ಹೆಸರು ಮಾಡಿರುವ ಈ ಸ್ನೇಹಕೂಟ ಗೆಳೆಯರ ಬಳಗದ ಗಣೇಶನಿಗೆ ಇಡೀ ಊರೇ ಬಂದು ಬೀಳ್ಕೊಡಿಗೆ ನೀಡಿದ್ದು ವಿಶೇಷವಾಗಿತ್ತು.

ಗಣಪತಿ ಉತ್ಸವಕ್ಕೆ ಸುತ್ತಮುತ್ತಲ ಊರುಗಳಿಂದಲೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಜನಪ್ರತಿನಿಧಿಗಳು ಸಹಕಾರ ನೀಡಿದ್ದರು. ಪೊಲೀಸ್ ಇಲಾಖೆ ಗಣೇಶೋತ್ಸವದ ಕಾರ್ಯಕ್ರಮದ ನಿಮಿತ್ತ ಪಟ್ಟಣ ವ್ಯಾಪ್ತಿಯ ಮದ್ಯದಂಗಡಿಗಳನ್ನು ಸಂಜೆ ಬಂದ್ ಮಾಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.