ಅರ್ಥಪೂರ್ಣವಾಗಿ ಡಾ.ಬಾಬು ಜಗಜೀವನ್‌ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನ್‌ರಾಮ್ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಬಾಬು ಜಗಜೀವನ್‌ರಾಮ್ ಜಯಂತಿಯನ್ನು ಏಪ್ರಿಲ್ 5ರಂದು ಹಾಗೂ ಏಪ್ರಿಲ್ 14ರಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ನಗರದ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು. ಇಬ್ಬರು ಮಹನೀಯರ ಜಯಂತಿಗಳ ಆಚರಣೆ ಸಂಬಂಧ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲು ಅಗತ್ಯ ಕ್ರಮವಹಿಸಬೇಕು ಹಾಗೂ ಜಯಂತಿ ಕಾರ್ಯಕ್ರಮದಲ್ಲಿ ವೇದಿಕೆ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಉಪಾಹಾರ ಹಾಗೂ ನೀರಿನ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳು ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಎಸ್‌ಎಸ್‌ಎಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಂಬಂಧ ಬಹುಮಾನ ನೀಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ ಮಾತನಾಡಿ, ಶಿಷ್ಟಾಚಾರದ ಅನ್ವಯ ಆಹ್ವಾನ ಪತ್ರಿಕೆಗಳನ್ನು ಮುದ್ರಣ ಮಾಡಿ ಜನಪ್ರತಿನಿಧಿಗಳು ಹಾಗೂ ಮುಖಂಡರಿಗೆ ನೀಡಲಾಗುವುದು. ಜಯಂತಿಗಳ ಬಗ್ಗೆ ಕರಪತ್ರ, ಪೋಸ್ಟರ್, ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಮುದ್ರಿಸಲಾಗುವುದು. ಜಯಂತಿಯಲ್ಲಿ ಭಾಗವಹಿಸುವವರಿಗೆ ಉಪಾಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
‘ನಗರದಲ್ಲಿ ನನೆಗುದಿಗೆ ಬಿದ್ದಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿಯನ್ನು ಬೇಗ ಮುಗಿಸಿ ಬಳಕೆಗೆ ನೀಡಬೇಕು. ಎಸ್.ಸಿ.ಪಿ.ಹಾಗೂ ಟಿ.ಎಸ್.ಪಿ. ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆ ಆಗಬೇಕು. ಸರ್ಕಾರಿ ಶಾಲೆ, ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಜಯಂತಿಯಲ್ಲಿ ಭಾಗವಹಿಸಬೇಕು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಮುದಾಯದ ಮುಖಂಡರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಡಾ. ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿಗೆ ಸಂಬಂಧ ಗುರುವಾರ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ 23 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ನಂತರ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಇತರರು ಇದ್ದರು.