ನ್ಯೂಸ್

‘ಅರ್ಜಿ ಸಲ್ಲಿಸಿದ ಮಹಾನುಭಾವನನ್ನು ನೋಡಬೇಕು’: ಸಿಜೆ ಅಂಜಾರಿಯಾ

ಬೆಂಗಳೂರು: ತನ್ನನ್ನು ತಾನು ನೂತನ ಬಿಬಿಎಂಪಿಯ ತಂದೆ ಎಂದು ನಮೂದಿಸಿದ್ದ ಅರ್ಜಿ ಸಲ್ಲಿಸಿದ ಮಹಾನುಭಾವನನ್ನು ಒಮ್ಮೆ ನೋಡಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರು ಪ್ರಕರಣವೊಂದರ ವಿಚಾರಣೆ ವೇಳೆ ತಿಳಿಸಿದ್ದು, ಕೋರ್ಟ್ ಹಾಲ್‌ನಲ್ಲಿ ಕೆಲಕ್ಷಣ ನ್ಯಾಯವಾದಿಗಳು ಅವಕ್ಕಾದರು.

ಬಿಬಿಎಂಪಿ ವ್ಯಾಪ್ತಿಗೆ ಅಗತ್ಯವಿರುವಷ್ಟು ಮೇಯರ್‌ಗಳನ್ನು ನೇರವಾಗಿ ಅಯ್ಕೆ ಮಾಡುವಂತೆ ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ, ಬಿಬಿಎಂಪಿಗೆ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿತ್ತು. ಮಂಗಳವಾರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿ ಸಲ್ಲಿಸಿದ ಮಹಾನುಭಾವ ಯಾರು ಎಂದು ನೋಡಬೇಕಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬಿಬಿಎಂಪಿಗೆ ಚುನಾವಣೆ ನಡೆಸಬಾರದು. ಬಿಬಿಎಂಪಿ ವ್ಯಾಪ್ತಿಗೆ ಅಗತ್ಯವಿರುವಷ್ಟು ಮೇಯರ್‌ಗಳನ್ನು ನೇರವಾಗಿ ಆಯ್ಕೆ ಮಾಡುವಂತೆ ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ, ಬಿಬಿಎಂಪಿಗೆ ನಿರ್ದೇಶನ ನೀಡಬೇಕು.

ಅದೇ ರೀತಿ ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ, ಬಿಬಿಎಂಪಿ ಹಾಗೂ ರಾಜಕೀಯ ಪಕ್ಷಗಳು ಒಟ್ಟಾಗಿ ಸೇರಿ ಬಿಬಿಎಂಪಿಗೆ ತಾತ್ಕಾಲಿಕ ಮೇಯರ್ ಆಗಲು ಮನವಿ ಮಾಡಿಕೊಳ್ಳುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಅರ್ಜಿದಾರ ಮುರಳಿ ಕೃಷ್ಣ ಬೃಹ್ಮಾನಂದಂ ವಿಚಾರಣೆ ಗೈರು ಹಾಜರಾಗಿದ್ದರು. ಅರ್ಜಿಯಲ್ಲಿ ಅಸಂಬದ್ಧ ಮನವಿಗಳನ್ನು ಮಾಡಲಾಗಿದ್ದು ವಜಾಗೊಳಿಸಬೇಕು ಎಂದು ಸರ್ಕಾರಿ ಪರ ವಕೀಲರು ನ್ಯಾಯಪೀಠವನ್ನು ಮನವಿ ಮಾಡಿದರು. ಈ ವೇಳೆ ಪೀಠವು ಸದ್ಯಕ್ಕೆ ಅರ್ಜಿ ವಜಾಗೊಳಿಸುವುದಿಲ್ಲ. ಅರ್ಜಿ ಸಲ್ಲಿಸಿದ ಮಹಾನುಭಾವ ಯಾರು ಎಂದು ನೋಡಬೇಕಿದೆ ಎಂದು ಹೇಳಿ ವಿಚಾರಣೆ ಮುಂದೂಡಿತು.