ನ್ಯೂಸ್

ಅರುಣ್‌ಕುಮಾರ್ ಮೇಲೆ ಹಲ್ಲೆಗೆ ಖಂಡನೆ

ಅರಸೀಕೆರೆ: ಸವಿತಾ ಸಮಾಜದ ಜಿಲ್ಲಾ ಪ್ರತಿನಿಧಿ ಅರುಣ್‌ಕುಮಾರ್ ಮೇಲಿನ ಹಲ್ಲೆ ಖಂಡಿಸಿ ಸವಿತಾ ಸಮಾಜದ ಹಲವು ಮುಖಂಡರು ಮಂಗಳವಾರ ಮಧ್ಯಾಹ್ನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದರ ಜತೆಗೆ ಕ್ರಮಕ್ಕೆ ಒತ್ತಾಯಿಸಿ ಶಿರಸ್ತೇದಾರ್ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ಸವಿತಾ ಸಮಾಜದ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ನಟ ಎಂ.ಎಸ್. ಮುತ್ತುರಾಜ್ ಮಾತನಾಡಿ, ಜನಸಾಮಾನ್ಯರ ಸೇವೆಯಲ್ಲಿ ನಿತ್ಯ ನಿರತರಾಗಿರುವ ಮುಖಂಡನ ಮೇಲೆ ಅಣ್ಣಾಯಕನಹಳ್ಳಿ ವಿಜಯಕುಮಾರ್ ಹಾಗೂ ಆತನ ಕಾರು ಚಾಲಕ ಹಾಡು ಹಗಲಿನಲ್ಲಿಯೇ ಕಬ್ಬಿಣದ ಸಲಾಕೆಯಿಂದ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ನಮ್ಮ ಸಮುದಾಯದವರು ಮೃಗದ ರೀತಿ ವರ್ತಿಸಿ ಜೈಲು ಸೇರಿದ ಉದಹರಣೆಗಳಿಲ್ಲ. ಪೊಲೀಸರ ಸಕಾಲಿಕ ಪ್ರವೇಶದಿಂದ ಸಂಭವನೀಯ ಜೀವಹಾನಿ ತಪ್ಪಿದಂತಾಗಿದೆ. ಇಂತಹ ವರ್ತನೆ ತೋರಿದ ಇಬ್ಬರಿಗೂ ಕಾನೂನು ಅಡಿಯಲ್ಲಿ ಕಠಿಣ ಕ್ರಮ ಜರುಗಿಸಬೇಕು. ಜತೆಗೆ ಯಾವುದೇ ಕ್ಷೌರದ ಅಂಗಡಿಗೆ ಸೇರಿಸಬಾರದು ಎಂದು ಸಹೋದ್ಯೋಗಿಗಳಲ್ಲಿ ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ, ಅರುಣ್‌ಕುಮಾರ್ ರಾಜಕೀಯ ಏಳಿಗೆ ಹತ್ತಿಕ್ಕಲು ಷಡ್ಯಂತ್ರ ನಡೆಯುತ್ತಿದೆ. ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಘಟನೆ ಮರುಕಳಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೇ ಭಿತ್ತಿಪತ್ರ ಪ್ರದರ್ಶಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮುಖಂಡ ತಿಪಟೂರು ನಾಗರಾಜ್, ತಾಲೂಕು ಅಧ್ಯಕ್ಷ ಶಿವಕುಮಾರ್, ವೇಲು, ವಿಜಯಕುಮಾರ್, ರಾಜು, ಶ್ರೀನಿವಾಸ್, ಶರ್ಮಾ, ಷಣ್ಮುಗ ಇನ್ನಿತರರು ನೇತೃತ್ವದ ವಹಿಸಿದ್ದರು.