ನ್ಯೂಸ್

ಅರಿವು ಭಾರತ ನಡೆಸುತ್ತಿರುವ ಸಾಮಾಜಿಕ ಬದಲಾವಣೆ ಕೆಲಸಗಳು ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿಯಾಗಲಿವೆ / ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಯಲ್ಲಿ ಅರಿವು ಭಾರತ ನಡೆಸುತ್ತಿರುವ ಸಾಮಾಜಿಕ ಬದಲಾವಣೆಯ ಕೆಲಸಗಳು ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿಯಾಗಲಿವೆ. ಇಲ್ಲಿನ ಪ್ರಯೋಗಗಳನ್ನು ಮತ್ತಷ್ಟು ವಿಸ್ತರಿಸುವ ಕೆಲಸ ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿಯಲ್ಲಿ ಶಿಕ್ಷಕ ಸುಬ್ರಮಣಿ ಅವರ ಮನೆಯಲ್ಲಿ ಸಮಾನತೆಗಾಗಿ ಸಹಭೋಜನವನ್ನು ಉದ್ಘಾಟಿಸಿ ಮಾತನಾಡಿ, 'ಮನೆ ಪ್ರವೇಶ' ಮತ್ತು 'ದೇವಾಲಯ ಪ್ರವೇಶ' ಕಾರ್ಯಕ್ರಮಗಳು ೧೦ ವರ್ಷದಿಂದ ನಿರಂತರವಾಗಿ ನಡೆಯುತ್ತಿದ್ದು, ಈಗ ಅವುಗಳನ್ನು ಬೇರೆ ಬಗೆಯಲ್ಲಿ ವಿಸ್ತರಿಸುವ ಕೆಲಸ ಮಾಡಬೇಕಿದೆ. ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಬದಲಾವಣೆಯ ವೇಗವನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.

ಹನುಮನಹಳ್ಳಿಯ ವೀರಾಂಜನೇಯ ದೇವಾಲಯಕ್ಕೆ ಸರ್ವರಿಗೂ ಪ್ರವೇಶವಿದೆ ಎಂಬ ಬೋರ್ಡ್ ಹಾಕಿ 'ಈ ದೇವಾಲಯ ಅಸ್ಪೃಶ್ಯತೆ ಮುಕ್ತ ದೇವಾಲಯ' ಎಂದು ಘೋಷಿಸಿದರು. ಜಿಲ್ಲೆಯ ೧೩೦೦ ದೇವಾಲಯಗಳಿಗೂ ಬೋರ್ಡ್ ಅಳವಡಿಸುವ ಕೆಲಸವನ್ನು ಈಗ ಆರಂಭಿಸಿದ್ದೇವೆ ಎಂದು ತಿಳಿಸಿದರು.

ನಿವೃತ್ತ ಜಿಲ್ಲಾಧಿಕಾರಿ ಶಾಂತರಾಜ್ ಮಾತನಾಡಿ, ಸ್ವತಂತ್ರ ಭಾರತವು ನಮ್ಮನ್ನು ಬದಲಾವಣೆಗೆ ಒತ್ತಾಯಿಸುತ್ತಿದೆ. ಇನ್ನು ತಡಮಾಡದೆ ಎಲ್ಲಾ ಬಾಗಿಲುಗಳು ಎಲ್ಲರಿಗೂ ತೆರೆಯಬೇಕು. ಇದು ಮಾನವೀಯತೆಯ ಕೆಲಸ ಎಂದರು.

ಶಿಕ್ಷಣ ಪಡೆದವರು ಸಂವಿಧಾನ ಆಶಯಗಳನ್ನು ಪಾಲಿಸಬೇಕು. ತಾಲ್ಲೂಕಿನ ಎಲ್ಲಾ ದೇವಾಲಯಗಳನ್ನು ಅಸ್ಪೃಶ್ಯತೆ ಮುಕ್ತ ದೇವಾಲಯಗಳನ್ನಾಗಿಸಲು ಶ್ರಮಿಸುವುದಾಗಿ ತಹಶೀಲ್ದಾರ್ ವಿ.ಗೀತ ಹೇಳಿದರು. ನೆರೆದಿದ್ದ ಎಲ್ಲರಿಗೂ ಅವರು ಪ್ರತಿಜ್ಞೆ ಬೋಧಿಸಿದರು.

ಮೇಲಾಗಾಣಿ ಗ್ರಾಮದಲ್ಲಿ ಅಸ್ಪೃಶ್ಯತೆ ಸಡಿಲಗೊಂಡಿರುವುದನ್ನು ನೆನಪಿಸಿಕೊಂಡ ವಕೀಲ ಶ್ರೀನಿವಾಸರೆಡ್ಡಿಯವರು ಸಮಸಮಾಜದ ಕನಸನ್ನು ನನಸಾಗಿಸಲು ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿದರು. ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ಅರವಿಂದ್ ಮಾತನಾಡಿ, ತಮ್ಮ ಊರಿನಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ದಲಿತ ಮುಖಂಡ ಟಿ ವಿಜಯ ಕುಮಾರ್ ಮಾತನಾಡಿ, ಪ್ರೀತಿಯಿಂದಷ್ಟೇ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಸಾಧ್ಯ. ಎಲ್ಲಾ ಜಾತಿಸಮುದಾಯಗಳ ಸಹಭಾಗಿತ್ವದಲ್ಲಿ ಈ ಕೆಲಸ ನಡೆಯಬೇಕು ಎಂದರು.

ಹನುಮನಹಳ್ಳಿ ಸುಬ್ರಮಣಿ ಮತ್ತು ನಲ್ಲೂರು ಸೋಮಪ್ಪನವರಿಗೆ ಇದೇ ಸಂದರ್ಭದಲ್ಲಿ 'ಗ್ರಾಮರತ್ನ' ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಜರಾಯಿ ತಹಶೀಲ್ದಾರ ಶ್ರೀನಿವಾಸರೆಡ್ಡಿ, ಜನಪ್ರಕಾಶನದ ರಾಜಶೇಖರ ಮೂರ್ತಿ, ಪರ್ವ ಫಿಲ್ಮ್ ವಿನಯ್, ಅರಿವು ಭಾರತ ತಂಡದ ಮುಖ್ಯಸ್ಥ ಡಾ. ಶಿವಪ್ಪ ಅರಿವು, ರಾಜಕಲ್ಲಹಳ್ಳಿ ಶ್ರೀನಿವಾಸ್, ನಾಗನಾಳ ರಮೇಶ್, ಕರಡುಬಂಡೆ ಮೂರ್ತಿ, ಕೊಂಡರಾಜನಹಳ್ಳಿ ಮಂಜುಳ, ವೆಂಕಟಾಚಲಪತಿ, ರಾಧಾಮಣಿ, ವಿ. ಜಿ. ಮಂಜುನಾಥ್, ಹನುಮನಹಳ್ಳಿ ಶ್ರೀನಿವಾಸ್, ಸುಬ್ರಮಣಿ, ಗೋವಿಂದೆಗೌಡ, ದಿಲೀಪ್, ಅದೀಪ್ ಮತ್ತಿತರರು ಭಾಗವಹಿಸಿದ್ದರು.

ಚಿತ್ರ ೨೫ ಕೆ.ಎಲ್.ಆರ್. ೦೫ : ಹನುಮನಹಳ್ಳಿಯಲ್ಲಿ ಸಹಭೋಜನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ, ಡಾ.ಶಿವಪ್ಪ ಅರಿವು, ತಹಸೀಲ್ದಾರ್ ವಿ.ಗೀತಾ ಮುಂತಾದವರು ಭಾಗವಹಿಸಿರುವುದು.