ಗಜಪಡೆ, ಅಶ್ವರೋಹಿ ದಳ ಹಾಗೂ ವಿವಿಧ ಪೊಲೀಸ್ ತುಕಡಿಗಳು ಸೋಮವಾರ ಅರಮನೆ ಅಂಗಳದಲ್ಲಿ ಜಂಬೂಸವಾರಿ ತಾಲೀಮು ನಡೆಸಿದವು.
ಅರಮನೆಯ ಮುಂಭಾಗದಲ್ಲಿ ನಡೆದ ಜಂಬೂಸವಾರಿಯ ಮೊದಲ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ, ಅಶ್ವರೋಹಿ ದಳದ ಕುದುರೆಗಳು, ವಿವಿಧ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಭಾಗವಹಿಸಿದ್ದವು. ನಿಶಾನೆ ಆನೆ ಧನಂಜಯ, ನೌಪಥ್ ಆನೆಯಾಗಿ ಗೋಪಿ ಮುಂದೆ ಸಾಗುತ್ತಿದ್ದಂತೆ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿ ಸಾಲಾನೆಗಳಾಗಿ ಸಾಗಿದವು.
ಬಳಿಕ ಅಭಿಮನ್ಯು ಕುಮ್ಕಿಗಳಾದ ಕಾವೇರಿ ಮತ್ತು ರೂಪಾಳೊಂದಿಗೆ ವೇದಿಕೆ ಮುಂಭಾಗ ಬರುತ್ತಿದ್ದಂತೆ ವೇದಿಕೆ ಮೇಲಿದ್ದ ಗಣ್ಯರು ಪುಷ್ಪಾರ್ಚನೆ ಮಾಡಿದರು. ಈ ವೇಳೆ ರಾಷ್ಟ್ರಗೀತೆ ನುಡಿಸಿ, 21 ಕುಶಾಲತೋಪು ಸಿಡಿಸಲಾಯಿತು.
ಅ.2ರಂದು ದಸರಾ ಜಂಬೂಸವಾರಿ ದಿನ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಬರುವ ಮಾರ್ಗ, ಪುಷ್ಪಾರ್ಚನೆ ಮಾಡುವ ಸ್ಥಳ, ಆನೆಗಳ ತಂಡದ ಮುಂದೆ ಸಂಚರಿಸಲಿರುವ ಅಶ್ವರೋಹಿದಳ, ಪಥಸಂಚಲನದಲ್ಲಿ ಪಾಲ್ಗೊಳ್ಳುವ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಯಾವ ಕ್ರಮಾಂಕದಲ್ಲಿ ಸಾಗಬೇಕೆಂಬುದನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ತಾಲೀಮು ಯಶಸ್ವಿಯಾಗಿ ಜರುಗಿತು. ಸೆ.30 ರಂದು ಅಂತಿಮ ಹಂತದ ತಾಲೀಮು ನಡೆಯಲಿದೆ.
ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾತನಾಡಿ, ನಾಡಹಬ್ಬ ದಸರಾ ನಿಮಿತ್ತ ಗಜಪಡೆಗೆ ಎಲ್ಲ ತಾಲೀಮು ಮುಗಿಸಲಾಗಿದ್ದು, ಕೊನೆಯ ಹಂತದ ಪುಷ್ಪಾರ್ಚನೆ ತಾಲೀಮನ್ನು ಇಂದು ನಡೆಸಲಾಗಿದೆ. ಪುಷ್ಪಾರ್ಚನೆ ದಿನ ಯಾವ ರೀತಿ ಕ್ರಮವಾಗಿ ಮೆರವಣಿಗೆ ಸಾಗಬೇಕು ಎಂಬುದನ್ನು ಇಂದು ತಾಲೀಮು ನಡೆಸಲಾಗಿದ್ದು, ನಿಶಾನೆ ಆನೆ ಧನಂಜಯ, ನೌಪಥ್ ಆನೆಯಾಗಿ ಗೋಪಿ ಸ್ವಲ್ಪವೂ ವಿಚಲಿತರಾಗದೇ ಉತ್ತಮವಾಗಿ ಸ್ಪಂದಿಸಿವೆ ಎಂದರು.
ಇಂದಿನ ತಾಲೀಮಿನಲ್ಲಿ ಎಲ್ಲ ಆನೆಗಳು ಭಾಗಿಯಾಗಿವೆ. ಕುಶಾಲತೋಪು ಸಿಡಿಸಿದ ವೇಳೆ ಹೊರಹೊಮ್ಮಿದ ಸದ್ದಿಗೆ ಹೊಂದಿಕೊಂಡಿದ್ದು, ಜಂಬೂಸವಾರಿ ಮೆರವಣಿಗೆಗೆ ಎಲ್ಲ ಆನೆಗಳು ಸಿದ್ಧಗೊಂಡಿವೆ ಎಂದರು.
ಆನೆ ಯೋಜನೆಯ ಸಿಸಿಎಫ್ ಮನೋಜ್ ರಾಜನ್ ಮಾತನಾಡಿ, ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಎಲ್ಲ ಆನೆಗಳು ಸಿದ್ದಗೊಂಡಿವೆ. ವಿವಿಧ ಹಂತದ ತಾಲೀಮಿನ ಬಳಿಕ ಇದೀಗ ಅಂತಿಮ ಸುತ್ತಿನಲ್ಲಿ ಮೆರವಣಿಗೆಯ ರಿಹರ್ಸಲ್ ನಡೆಸಲಾಗಿದೆ. ಮೆರವಣಿಗೆಯ ದಿನ ಆನೆಗಳು ಯಾವ ರೀತಿ ಸಾಗಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು ಪೂರ್ವ ತಾಲೀಮು ನಡೆಸಲಾಗಿದೆ. ಈ ಮೂಲಕ ಜಂಬೂಸವಾರಿ ಮೆರವಣಿಗೆಗೆ ಆನೆಗಳನ್ನು ತಯಾರಿ ಮಾಡಲಾಗುತ್ತಿದೆ ಎಂದರು.
ಡಿಸಿಪಿಗಳಾದ ಸುಂದರ್‌ರಾಜ್, ಬಿಂದುಮಣಿ, ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ರವಿಶಂಕರ್, ಸಿಎಆರ್ ಡಿಸಿಪಿ ಸಿದ್ದನಗೌಡ ಪಾಟೀಲ್ ಇದ್ದರು.
ಸತ್ಯಕ್ಕೆ ದೂರವಾದುದು
ಅರಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಶ್ರೀಕಂಠ ಆನೆ ಅಡ್ಡಾದಿಡ್ಡಿಯಾಗಿ ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆತಂಕ ಸೃಷ್ಟಿಸಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಇದು ಸತ್ಯಕ್ಕೆ ದೂರವಾದುದು. ಶ್ರೀಕಠ ಆನೆ ಅಡ್ಡಾದಿಡ್ಡಿಯಾಗಿ ಓಡಿದೆ ಎಂದು ತಿರುಚಲಾದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ. ವಿಡಿಯೋ ದೃಶ್ಯಾವಳಿಯ ವೇಗ ಹೆಚ್ಚಿಸುವ ಮೂಲಕ ಅಡ್ಡಾದಿಡ್ಡಿಯಾಗಿ ಓಡಾಡಿದಂತೆ ಬಿಂಬಿಸಲಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಈ ರೀತಿ ತೋರಿಸಲಾಗಿದೆ. ಆನೆಗಳ ಬಳಿ ರೀಲ್ಸ್ ಮಾಡಿದ್ದವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಭಾಗಿ
ಪಟ್ಟದ ಆನೆ ಶ್ರೀಕಂಠ ರಾಜಮನೆತನದ ನವರಾತ್ರಿ ದರ್ಬಾರಿನ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದು, ಶ್ರೀಕಂಠನಿಗೆ ಏಕಲವ್ಯ ಸಾಥ್ ನೀಡಿದದಾನೆ. ನಾದಸ್ವರ ವಾದನದ ಹಿಮ್ಮೇಳದೊಂದಿಗೆ ಅತ್ಯಂತ ಗಂಭೀರವಾಗಿ ಹೆಜ್ಜೆ ಹಾಕುತ್ತಾ ಸಾಗಿದ ಶ್ರೀಕಂಠ ಹಾಗೂ ಏಕಲವ್ಯರ ಜತೆಗೆ ರಾಜಮನೆತನಕ್ಕೆ ಸೇರಿರುವ ಪ್ರೀತಿ ಮತ್ತು ಚಂಚಲ ಆನೆಗಳು, ಪಟ್ಟದ ಕುದುರೆ, ಹಸುಗಳು ಭಾಗಿಯಾಗಿವೆ.