ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯ ರಾಷ್ಟ್ರೀಯ ಪ್ರಮುಖ ಗಿರೀಶ್ ಕುಬೇರ್ ಮಾತನಾಡಿದರು. ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಜಯಪ್ಪ, ವಿಠಲ್, ಗಿರಿಜಾ, ಶಾರದಾ ಇತರರಿದ್ದರು. 
ನ್ಯೂಸ್

ಅರಣ್ಯಹಕ್ಕು ಕಾಯ್ದೆ ಜಾರಿ ಕರ್ನಾಟಕಕ್ಕೆ ಕೊನೇ ಸ್ಥಾನ

ವನವಾಸಿ ಕಲ್ಯಾಣ ಸಂಸ್ಥೆಯ ರಾಷ್ಟ್ರೀಯ ಪ್ರಮುಖ ಗಿರೀಶ್ ಕುಬೇರ್ ಮಾಹಿತಿ

ಹುಣಸೂರು : ಕರ್ನಾಟಕದಲ್ಲಿ ಆದಿವಾಸಿ ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯ ಮೂಲಕ ಆಗಿರುವ ಅನ್ಯಾಯ ಸರಿಪಡಿಸುವತ್ತ ನಿರೀಕ್ಷಿತ ಸಾಧನೆ ಆಗಿಲ್ಲವೆಂದು ವನವಾಸಿ ಕಲ್ಯಾಣ ಸಂಸ್ಥೆಯ ರಾಷ್ಟ್ರೀಯ ಪ್ರಮುಖ ಗಿರೀಶ್ ಕುಬೇರ್ ತಿಳಿಸಿದರು.

ನಗರದ ಡೀಡ್ ಸಂಸ್ಥೆಯಲ್ಲಿ ಆದಿವಾಸಿ ಮುಖಂಡರೊಂದಿಗೆ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ದೆಹಲಿಯ ಕಾಲ್ ಫಾರ್ ಜಸ್ಟಿಸ್‌ನ ಸತ್ಯಶೋಧನಾ ಸಮಿತಿ ನ್ಯಾಯಾಧೀಶ ಎಸ್. ಎನ್. ಧಿಂಗ್ರ, ಕೇಂದ್ರ ನಿವೃತ್ತ ಅರಣ್ಯಧಿಕಾರಿ ವಿ.ಕೆ.ಬಹುಗುಣ, ಕಾರ್ಯದರ್ಶಿ, ಸುಪ್ರೀಂಕೋರ್ಟ್ ವಕೀಲರೂ ಆದ ರುತ್ವಿಕ್‌ದತ್ತ ಅವರನ್ನೊಳಗೊಂಡ ತಂಡ ಕರ್ನಾಟಕದಲ್ಲಿ ಅರಣ್ಯ ಹಕ್ಕಿನ ಕಾಯ್ದೆ ಯಾವರೀತಿ ಅನುಷ್ಠಾನಗೊಂಡಿದೆ, ಆದಿವಾಸಿಗಳಿಗೆ ಆಗಿರುವ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಲಾಗಿದೆಯೇ ಎಂಬುದನ್ನು ಅರಿಯಲು 2023 ರ ಜುಲೈ ತಿಂಗಳ ಅಂತ್ಯ ಭಾಗದಲ್ಲಿ ಹಾಡಿಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿತ್ತು. ಆ ವರದಿಯನ್ನು ಹಾಗೂ ಅದರ ಶಿಫಾರಸ್ಸುಗಳನ್ನು ಆದಿವಾಸಿ ಮುಖಂಡರಿಗೆ ತಿಳಿಸಲು ಸಮಿತಿಯ ಪರವಾಗಿ ಇಂದು ಸಭೆಯಲ್ಲಿ ಮಂಡಿಸಲಾಗಿದೆ ಎಂದರು.

ಕೊನೆಯ ಸ್ಥಾನದಲ್ಲಿದೆ ಕರ್ನಾಟಕ: ಸಮಿತಿ ನೀಡಿರುವ ವರದಿಯನ್ವಯ ಅರಣ್ಯ ಹಕ್ಕು ಕಾಯ್ದೆಯ ಸಮಗ್ರ ಜಾರಿಯಲ್ಲಿ ಕರ್ನಾಟಕ ರಾಷ್ಟ್ರದಲ್ಲೇ ಕೊನೇ ಸ್ಥಾನದಲ್ಲಿದೆ. ಆದಿವಾಸಿಗಳಿಗಾದ ಚಾರಿತ್ರಿಕ ಅನ್ಯಾಯ ಅರಣ್ಯ ಹಕ್ಕು ನೀಡಿ ಸರಿಪಡಿಸಿಲ್ಲ ಎಂದು ವರದಿಯಲ್ಲಿ ಹೇಳಿದೆ. ವೈಯಕ್ತಿಕ ಅರಣ್ಯ ಭೂಮಿ ಹಕ್ಕು ಕೇವಲ ಶೇ.5.17 ಮಾತ್ರ ಪ್ರಗತಿ ಸಾಧಿಸಲಾಗಿದೆ. ಸಾಮೂಹಿಕ ಹಕ್ಕು ಶೇ. 22 ಆಗಿದ್ದರೂ ಆ ಪ್ರದೇಶಗಳಲ್ಲಿ ಅರಣ್ಯ ಸಂಪನ್ಮೂಲ ವೃದ್ಧಿಸಲು ಕ್ರಮ ಜಾರಿಯಾಗಿಲ್ಲ. ಮೂಲನಿವಾಸಿ ಬುಡಕಟ್ಟುಗಳಾದ ಜೇನುಕುರುಬ ಆದಿವಾಸಿಗಳಿಗೆ ಕಾಯ್ದೆ ಕಾಲಂ 3.1()ಅನ್ವಯ ನೀಡಬೇಕಾದ ಅರಣ್ಯ ನೆಲಸುಗಳ ಮೇಲಿನ ಹಕ್ಕು ಶೂನ್ಯ ಸಾಧನೆಯಾಗಿದೆ. ಇದು ಅತಂಕಕಾರಿ ಎಂದಿರುವುದಲ್ಲದೆ ಆದಿ ವಾಸಿಗಳಿಗಾದ ಚಾರಿತ್ರಿಕ ಅನ್ಯಾಯ ಹಾಗೇ ಮುಂದುವರಿದಿದೆ ಎಂದರು.

ಶಿಫಾರಸ್ಸಿನಲ್ಲಿ ಗ್ರಾಮ ಸಭೆ, ಹಾಡಿ ಅರಣ್ಯ ಹಕ್ಕು ಸಮಿತಿ, ಉಪವಿಭಾಗದ ಹಾಗೂ ಜಿಲ್ಲಾ ಅರಣ್ಯ ಹಕ್ಕು ಸಮಿತಿಗೆ ಸೂಕ್ತ ತರಬೇತಿ ನೀಡಿ ಕಾಯ್ದೆಯಡಿ ಅವರವರ ಹಕ್ಕು ಜವಾಬ್ದಾರಿ ತಿಳಿಸಬೇಕು. ಅರಣ್ಯ, ಕಂದಾಯ ಹಾಗು ಬುಡಕಟ್ಟು ಇಲಾಖೆ ಸಮನ್ವಯತೆಯಿಂದ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದಿದೆಯಲ್ಲದೇ, ಅರಣ್ಯ ಸಂಪನ್ಮೂಲ ಸಂಗ್ರಹಣೆ ಹಾಗೂ ರಕ್ಷಣೆಗೆ ಯಾವ ಕ್ರಮವೂ ಕಾಯ್ದೆ ಪ್ರಕಾರ ನಡೆದಿಲ್ಲ ಮತ್ತು ಗ್ರಾಮ ಸಭೆಯ ಅಧಿಕಾರ, ಮಹತ್ವ ಕಡೆಗಣಿಸಿ ಅಧಿಕಾರಶಾಹಿ ವರ್ತನೆ ಮೆರೆಯಲಾಗಿದೆ ಎಂದಿದೆ. ಮುಖ್ಯಮಂತ್ರಿ ಅದ್ಯಕ್ಷತೆಯಲ್ಲಿ ರಾಜ್ಯ ಅರಣ್ಯ ಹಕ್ಕು ನಿರ್ವಹಣಾ ಸಮಿತಿ ಕೂಡಲೇ ಕಾರ್ಯ ಪ್ರವೃತ್ತ ವಾಗಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೇ ಕೇಂದ್ರ ಸರ್ಕಾರಕ್ಕೆ, ರಾಷ್ಟ್ರೀಯ ಪರಿಶಿಷ್ಟ ಆಯೋಗಕ್ಕೆ, ರಾಷ್ಟ್ರಪತಿಗಳ ಅವಗಾಹನೆಗೆ ತಂದು ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕದಲ್ಲಿ ಆದಿವಾಸಿಗಳಿಗೆ ಆಗಿರುವ ಲೋಪ ಸರಿಪಡಿಸಲು ತಿಳಿಸಲಾಗಿದೆ ಎಂದರು.

ಸಭೆಯಲ್ಲಿ ಆದಿವಾಸಿ ಮುಖಂಡರಾದ ಗಣೇಶ್, ಜಯಪ್ಪ ಗಿರಿಜಾ, ಜೆ.ಕೆ.ರಾಜು, ಡಿ.ಬಿ. ಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ರಮಣಿ, ಡೀಡ್ ಸಂಸ್ಥೆ ಪ್ರಕಾಶ್, ಶಾರದಾ,ಶ್ರೀಕಾಂತ್, ಶಿವಣ್ಣ, ವಿಠಲ್, ರಾಮನಗರದ ರಾಜು, ವನವಾಸಿ ಕಲ್ಯಾಣ ಸಂಸ್ಥೆಯ ಕಾರ್ಯಕರ್ತರದ ಕಾಶಪ್ಪ ದೊರೆ, ಮಣಿಕಂಠ, ಪುಟ್ಟಮ್ಮ, ಸುಜಾತಾ ಪಾಲ್ಗೊಂಡಿದ್ದರು.