ಅರಣ್ಯ ಇಲಾಖೆ ನೇಮಕಾತಿಯಲ್ಲಿ ಶೇ.100ರಷ್ಟು ಅವಕಾಶ ನೀಡುವಂತೆ ಒತ್ತಾಯಿಸಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ವಿದ್ಯಾರ್ಥಿಗಳು ಆನಂದಪುರದಲ್ಲಿ ಬೀದಿ ನಾಟಕ ಪ್ರದರ್ಶಿಸಿದರು. 
ನ್ಯೂಸ್

ಅರಣ್ಯಶಾಸ್ತ್ರ ಪದವಿ ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನ

ಆನಂದಪುರ: ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಥಿಗಳು ನೇರ ನೇಮಕಾತಿಯಲ್ಲಿ ತಮಗೆ ಶೇ.100 ಅವಕಾಶ ನೀಡುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಬೀದಿ ನಾಟಕ ಪ್ರದರ್ಶನ ಮೂಲಕ ತಮ್ಮ ಸಮಸ್ಯೆ ವಿವರಿಸಿದರು.

ವಿವಿ ಆವರಣದಿಂದ 3 ಕಿ.ಮೀ. ಮೆರವಣಿಗೆ ನಡೆಸಿದರು. ಅರಣ್ಯಶಾಸ್ತ್ರ ಪದವೀಧರ ವಿದ್ಯಾರ್ಥಿ ಉದ್ಯೋಗ ಅವಕಾಶ ಸಿಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಆಧರಿಸಿ ಬೀದಿ ನಾಟಕ ಪ್ರದರ್ಶಿಸಿದರು.

ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಿ.ಎನ್.ಮಾರುತಿ, 2003ರವರೆಗೆ ಅರಣ್ಯ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅರಣ್ಯಶಾಸ್ತ್ರ ಪದವೀಧರರಿಗೆ ಶೇ.50 ಅವಕಾಶ ಇತ್ತು. 2012ರ ತಿದ್ದುಪಡಿಯಲ್ಲಿ ಶೇ.75 ಅವಕಾಶ ನೀಡಲಾಗಿತ್ತು. ಆದರೆ 2018ರ ನಂತರ ಹೊಸ ನಿಯಮ ರೂಪಿಸಿ ಶೇ.50 ನೀಡಲಾಗಿದೆ. ಕಳೆದ 8 ವಷರ್ಗಳಿಂದ ನೇರ ನೇಮಕಾತಿ ನಡೆಸದೆ ಬಡ್ತಿ ಮೂಲಕ ಅರಣ್ಯ ಇಲಾಖೆ ವಿವಿಧ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಇದರಿಂದ ಅರಣ್ಯಶಾಸ್ತ್ರ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದರು.

ಉಪತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಬೇಡಿಕೆಯ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಚೈತನ್ಯ, ಅಮರನಾಥ , ಮಂಜುನಾಥ, ಲಕ್ಷ್ಮೀ, ಹರ್ಷಿತಾ, ಅಮೃತಾ, ಅನೂಪ್, ಸಂತೋಷ್ ಇತರರಿದ್ದರು.