ವಿಜಯವಾಣಿ ಸುದ್ದಿಜಾಲ ಕೋಲಾರ
ಬಡವರ, ದಲಿತರು, ಆದಿವಾಸಿಗಳು ಸೇರಿದಂತೆ ಹಿಂದುಳಿದ ವರ್ಗಗಳ ಬಗರ್ ಹುಕುಂ ಸಾಗುವಳಿದಾರರ ಮತ್ತು ಅರಣ್ಯ ಭೂಮಿ ಸಾಗುವಳಿದಾರರ ಭೂಮಿಯ ಹಕ್ಕಿಗೆ ಮಾರಕವಾಗಿರುವ ಅರಣ್ಯ ಸಚಿವರ ಟಿಪ್ಪಣಿಯನ್ನು ರದ್ದುಪಡಿಸಲು ಒತ್ತಾಯಿಸಿ ತಹಶಿಲ್ದಾರ್ ಕಛೇರಿ ಮುಂದೆ ಬುಧವಾರ ಕೆ.ಪಿ.ಆರ್.ಎಸ್ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಟಿಪ್ಪಣಿಯ ಪ್ರತಿಯನ್ನು ಸುಟ್ಟು ಹಾಕಿದರು.
ಇತ್ತಿಚೆಗೆ ನಡೆದ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಟಿಪ್ಪಣಿಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಅರಣ್ಯ ಪ್ರದೇಶದ ಎಲ್ಲಾ ರೀತಿಯ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಲು ಕಂದಾಯ, ಗೃಹ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಹಾಗೂ ಇತರ ಸಂಬAಧಿತ ಇಲಾಖೆಯ ಅಧಿಕಾರಿಗಳು ನುರಿತ ವಿಷಯ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಅಧಿಕಾರಿಗಳ ರಾಜ್ಯ ಮಟ್ಟದ ಕಾರ್ಯಪಡೆಯ ಜೊತೆಗೆ ಬೆಂಗಳೂರು ನಗರ ಜಿಲ್ಲೆಗೆ ಒಂದು ಪ್ರತ್ಯೇಕ ಕಾರ್ಯಪಡೆಯನ್ನು ರಚಿಸಬೇಕು ಎಂಬ ಟಿಪ್ಪಣಿಯನ್ನು ಕಳುಹಿಸಿರುವುದು ಅತ್ಯಂತ ಅಘಾತಕಾರಿಯಾದುದ್ದು, ಹಾಗೂ ಹತ್ತಾರು ದಶಕಗಳಿಂದ ಅರಣ್ಯ ಹಾಗೂ ಕಂದಾಯ ಭೂಮಿಗಳಲ್ಲಿ ಬಗರ್ ಹುಕುಂ ಸಾಗುವಳಿಯಲ್ಲಿ ತೊಡಗಿರುವ ಲಕ್ಷಾಂತರ ದಲಿತ, ಆದಿವಾಸಿ, ಹಿಂದುಳಿದ ಕುಟುಂಬಗಳನ್ನು ಬೇಸಾಯದಿಂದ ಒಕ್ಕಲೆಬ್ಬಿಸುವ ಹೀನ ಪ್ರಯತ್ನವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ.ವೆAಕಟೇಶ್ ಆರೋಪಿಸಿದರು.
ಸರಕಾರ ಕೂಡಲೇ ರೈತರ ವಿರುದ್ದವಾಗಿ ನಡೆದುಕೊಳ್ಳುತ್ತಿರುವ, ಅರಣ್ಯ ಮಂತ್ರಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಟಿಪ್ಪಣಿಯನ್ನು ರದ್ದುಗೊಳಿಸಬೇಕು. ಅರಣ್ಯ ಹಕ್ಕು ಕಾಯ್ದೆ ೨೦೦೫ ರ ಅಡಿ ಸ್ವಾಧೀನದಲ್ಲಿರುವ ಇತರೆ ಸಾಮಾಜಿಕ ಸಮುದಾಯಗಳ ಜನರಿಗೂ ಭೂಮಿ ಹಕ್ಕು ಸಿಗುವಂತೆ ಅಗತ್ಯ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ಕಾರ್ಪೊರೇಟ್ ಕಂಪನಿಗಳಿಗೆ ಮೀಸಲು ಅಭಯಾರಣ್ಯ ಸೇರಿದಂತೆ ಸಾವಿರಾರು ಎಕರೆ ಅರಣ್ಯ ಭೂಮಿ ಮಂಜೂರು ಮಾಡಲು ಅವಕಾಶ ಕಲ್ಪಿಸಿರುವ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ ೨೦೨೩ ಅನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಆಲಹಳ್ಳಿ ವೆಂಕಟೇಶಪ್ಪ, ಪ್ರಧಾನ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಉಪಾಧ್ಯಕ್ಷರಾದ ಎನ್.ಎನ್.ಶ್ರೀರಾಮ್, ಗಂಗಮ್ಮ, ಹೊಲ್ಲಂಬಳ್ಳಿ ವೆಂಕಟೇಶಪ್ಪ, ಸಹಕಾರ್ಯದರ್ಶಿಗಳಾದ ಸುಗಟೂರು ಶ್ರೀಧರ್‌ರೆಡ್ಡಿ, ಗಂಗಟ್ಟ ಯಲ್ಲಪ್ಪ, ಮುಖಂಡರಾದ ವೀರೇಗೌಡ, ಮುನಿರತ್ನಮ್ಮ, ಚಿನ್ನಮ್ಮ, ರಾಜೇಂದ್ರ ಕುಮಾರ್, ಮುನಿಸ್ವಾಮಿ, ಮುಂತಾದವರು ಇದ್ದರು.
ಚಿತ್ರ ೦೪ ಕೆ.ಎಲ್.ಆರ್. ೦೧ : ಪ್ರಾಂತ ರೈತ ಸಂಘದ ವತಿಯಿಂದ ಅರಣ್ಯ ಸಚಿವರ ವಿರುದ್ಧ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್ ಕೊಂಡಪ್ಪನವರಿಗೆ ಮನವಿ ಸಲ್ಲಿಸಿದರು.