ವಿಜಯವಾಣಿ ಸುದ್ದಿಜಾಲ ಎಚ್.ಡಿ.ಕೋಟೆ
ಗಿರಿಜನರ ಆರ್ಥಿಕ ಅಭಿವೃದ್ಧಿಗಾಗಿ ಅರಣ್ಯ ಕಿರು ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿದ್ದು, ಇದರ ಪ್ರಯೋಜನ ಆದಿವಾಸಿಗಳಿಗೆ ನೇರವಾಗಿ ತಲುಪಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಗಿರಿಜನರ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಮತ್ತು ಆದಿವಾಸಿ ಗಿರಿಜನರ ಸಹಕಾರ ಸಂಘದ ಸಭೆಯಲ್ಲಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿರುವಂತೆ ಗಿರಿಜನರು ಅರಣ್ಯದಲ್ಲಿ ಸಂಗ್ರಹಣೆ ಮಾಡುವ ಕಿರು ಉತ್ಪನ್ನಗಳಿಗೂ ಸಹ ಬೆಂಬಲ ಬೆಲೆ ಘೋಷಣೆ ಮಾಡಿದೆ ಎಂದರು.
ತರಬೇತಿಯೊಂದಿಗೆ ಆರ್ಥಿಕ ನೆರವು :
ಗಿರಿಜನರು ಆರ್ಥಿಕವಾಗಿ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಕಾಡಿನಿಂದ ಹೊರಗಡೆ ಕೆಲಸಕ್ಕೆ ಹೋಗದ ಕಾರಣ, ಅವರ ಆರ್ಥಿಕ ಮಟ್ಟ ಕುಸಿದಿದೆ. ಗಿರಿಜನರನ್ನು ಸುಧಾರಣೆ ಮಾಡಲು ಸರ್ಕಾರ ನೆರವಿಗೆ ಬಂದಿದೆ. ಗಿರಿಜನರ ಸಹಕಾರ ಸಂಘಗಳ ಮೂಲಕ ವನಧನ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಮೂಲಕ ಸಹಕಾರ ಸಂಘಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಗಿರಿಜನರಿಗೆ ತರಬೇತಿ ನೀಡಲಾಗುತ್ತದೆ ಎಂದರು.
ಹಕ್ಕು ಕೊಡಿಸಿಕೊಡಿ : ಕೇಂದ್ರ ಸರ್ಕಾರ ಅರಣ್ಯ ಕಿರು ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಿದೆ. ಉತ್ಪನ್ನಗಳನ್ನು ಸಂಗ್ರಹಣೆ ಮಾಡಲು ಅರಣ್ಯದ ಕೆಲವೊಂದ ವಲಯದಲ್ಲಿ ಅವಕಾಶ ಇದೆ. ಈಗಾಗಲೇ ಗಿರಿಜನರು 50 ಭಾಗಗಳಲ್ಲಿ ಸಾಮುದಾಯಿಕ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸಿದ್ದು, ಇನ್ನೂ ಇತ್ಯರ್ಥವಾಗಿಲ್ಲ. ಹಾಗಾಗಿ ಹಕ್ಕುಗಳನ್ನು ಕೊಡಿಸಬೇಕು ಎಂದು ಗಿರಿಜನ ಮುಖಂಡರಾದ ಕಾವೇರ, ಶೈಲೇಂದ್ರ, ಕಾಳಕಲ್ಕರ್ ಮುಂತಾದವರು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಸೇರಿ ಅರಣ್ಯ ಹಕ್ಕುಗಳ ಬಗ್ಗೆ ಅರಣ್ಯ ಇಲಾಖೆ ಮತ್ತು ಗಿರಿಜನರ ನಡುವೆ ಹಲವು ಸಮಸ್ಯೆ ಉಂಟಾಗಿದ್ದು, ಕೆಲವೊಂದು ಸಮಸ್ಯೆಗಳನ್ನು ನಮ್ಮ ಇತಿಮಿತಿಯಲ್ಲಿ ಬಗೆಹರಿಸಲಾಗಿದೆ. ಆದರೆ ಕೆಲವೊಂದು ಜಟಿಲ ಸಮಸ್ಯೆಗಳನ್ನು ಕೇಂದ್ರ ಮಟ್ಟದಲ್ಲಿ ಬಗೆಹರಿಸಬೇಕಾಗಿದೆ ಎಂದರು.
ನಾಗರಹೊಳೆ ಮತ್ತು ಬಂಡೀಪುರ ಅರಣ್ಯದಲ್ಲಿ ಲಂಟಾನ ಗಿಡಗಳು ಹೆಚ್ಚಾಗಿ ಬೆಳೆಯುತ್ತಿದ್ದು, ಇದನ್ನು ತೆರವುಗೊಳಿಸಲು ಗಿರಿಜನರಿಗೆ ತರಬೇತಿ ನೀಡಿದರೆ ಅರಣ್ಯಕ್ಕೂ ಒಳ್ಳೆಯದಾಗುತ್ತದೆ ಮತ್ತು ಗಿರಿಜನರಿಗೂ ಕೆಲಸ ಸಿಗುತ್ತದೆ ಎಂದರು.
ಇದೇ ವೇಳೆ ಜಿ.ಕುಮಾರ್ ನಾಯಕ್ ಮತ್ತು ಅಭಿರಾಮ್ ಜಿ.ಶಂಕರ್ ಗಿರಿಜನರು ಸಂಗ್ರಹಣೆ ಮಾಡಿದ್ದ ಜೇನುತುಪ್ಪ ಮತ್ತು ಸೀಗೆಕಾಯಿ ಪುಡಿಯನ್ನು ಖರೀದಿ ಮಾಡಿದರು.
ಸಭೆಯಲ್ಲಿ ಜಿಪಂ ಸಿಇಒ ಅಧಿಕಾರಿ ಪ್ರಶಾಂತ್ ಮಿಶ್ರ, ಜಿಲ್ಲಾ ಗಿರಿಜನ ಯೋಜನ ಸಮನ್ವಯ ಅಧಿಕಾರಿ ಪ್ರಕಾಶ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮುನಿರಾಜ್, ತಹಸೀಲ್ದಾರ್ ಆರ್.ಮಂಜುನಾಥ್, ಇಒ ರಾಮಲಿಂಗಯ್ಯ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಗೋಪಾಲಕೃಷ್ಣ ಮೂರ್ತಿ, ರಾಜ್ಯ ಗಿರಿಜನ ಸಹಕಾರ ಮಹಾಮಂಡಲ ಅಧ್ಯಕ್ಷ ಮುದ್ದಯ್ಯ, ವಲಯ ಅರಣ್ಯ ಅಧಿಕಾರಿಗಳಾದ ವಿನಯ್ ಕುಮಾರ್, ಸಂತೋಷ ಹೂಗಾರ್, ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷ ಅಶೋಕ, ಉಪಾಧ್ಯಕ್ಷೆ ಬಸಮ್ಮ, ನಿರ್ದೇಶಕರಾದ ಚಿಕ್ಕಣ್ಣ, ಕಾಳಯ್ಯ, ದೇವರಾಜು, ಶ್ರೀಕೃಷ್ಣ, ಬೊಮ್ಮಿ, ಮಾಸ್ತಿ, ಮಹದೇವ ಇದ್ದರು.
ಪೋಟೋ ಇದೆ