ನ್ಯೂಸ್

ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಹತ್ತಾರು ವರ್ಷಗಳಿಂದ ವ್ಯವಸಾಯ ಮಾಡಿಕೊಂಡಿದ್ದ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೆ, ಪ್ರಕರಣ ವ್ಯಾಜ್ಯ ನ್ಯಾಯಾಲಯದಲ್ಲಿದ್ದರೂ ಕಿರುಕುಳ ನೀಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಗುರುವಾರ ಅರಣ್ಯ ಭವನದ ಬಳಿ ಪ್ರತಿಭಟನೆ ನಡೆಸಲಾಯಿತು.

ಮೈಸೂರು ತಾಲೂಕಿನ ಮಳಲವಾಡಿ ಗ್ರಾಮದ ಸರ್ವೆ ನಂ.24, 25, 26, 27, 28ರ ಜಮೀನನ್ನು ಅರಣ್ಯ ಇಲಾಖೆ ಅತಿಕ್ರಮಿಸಿಕೊಂಡು ಕಾಂಪೌಂಡ್ ನಿರ್ಮಿಸಿದೆ. ಆದರೆ, ಈ ಸರ್ವೆ ನಂಬರ್‌ಗಳ ಜಮೀನಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪುಟ್ಟಸಿದ್ದಮ್ಮ ಮತ್ತಿತರರು ಈಗಲೂ ಸೊಪ್ಪು, ತರಕಾರಿ ಬೆಳೆಯುತ್ತಿದ್ದಾರೆ. ಅಲ್ಲದೆ ಪುಟ್ಟಸಿದ್ದಮ್ಮ ಅವರ ಮಗ ನಿಂಗರಾಜು ಕುಟುಂಬದವರು ಸರ್ವೆ ನಂ.28ರಲ್ಲಿ ಮನೆ ನಿರ್ಮಿಸಿಕೊಂಡು 30 ವರ್ಷಗಳಿಂದಲೂ ವಾಸವಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪರಿಶಿಷ್ಟರು ಸ್ವಾಧೀನಾನುಭವದಲ್ಲಿರುವ ಜಾಗವನ್ನು ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಿರುವುದರಿಂದ ಜೀವನೋಪಾಯಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಪುಟ್ಟಸಿದ್ದಮ್ಮ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಸದರಿ ಜಾಗವನ್ನು ತುರ್ತಾಗಿ ಜಂಟಿ ಮೋಜಣಿ ಮಾಡಲು ತಿಳಿಸಿ, ನುರಿತ ಸರ್ವೆಯರ್ ನಿಯೋಜಿಸಬೇಕೆಂದು ಪತ್ರ ಬರೆದಿದ್ದರು. ಆದರೆ ಮೂರು ಬಾರಿ ಸರ್ವೆಯರ್‌ಗಳು ಅಳತೆ ಮಾಡಲು ಬಂದರೂ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಿಲ್ಲ ಎಂದು ದೂರಿದರು.

ಜಮೀನಿನ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳು ಪಿತೂರಿ ಮಾಡಿ 13 ವರ್ಷಗಳಿಂದ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ನಿಂಗರಾಜುನನ್ನು ಕೆಲಸದಿಂದ ತೆಗೆದಿದ್ದಾರೆ. ಈ ಸಂಬಂಧ ನಿಂಗರಾಜು ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಇಲಾಖಾಧಿಕಾರಿಗಳು ನಿಂಗರಾಜು ಕುಟುಂಬ ವಾಸ ಮಾಡುತ್ತಿರುವ ಮನೆಯನ್ನೇ ಇಲಾಖೆಯ ಉಗ್ರಾಣವೆಂದು ಸುಳ್ಳು ದಾಖಲೆ ಸೃಷ್ಟಿಸಿ ಖಾಲಿ ಮಾಡುವಂತೆ ಧಮ್ಕಿ ಹಾಕುತ್ತಿದ್ದಾರೆ. ನಿಂಗರಾಜು ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯಕ್ಕೆ ನಿರಂತರವಾಗಿ ಗೈರು ಹಾಜರಾಗುತ್ತಿರುವ ಇಲಾಖಾಧಿಕಾರಿಗಳು ಅರಣ್ಯ ಒತ್ತುವರಿ ಮಾಡಿರುವುದಾಗಿ ಸುಳ್ಳು ಆರೋಪದಡಿ ನಿಂಗರಾಜು ವಿರುದ್ಧ ದೂರು ದಾಖಲಿಸಿಕೊಂಡು ಹಲವಾರು ನೋಟಿಸ್ ನೀಡಿ, ವಿಚಾರಣೆ ನೆಪದಲ್ಲಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾರೆ. 30 ದಿನಗಳೊಳಗೆ ವಾಸದ ಮನೆ ಮತ್ತು ಸೊಪ್ಪು, ತರಕಾರಿ ಬೆಳೆಯುತ್ತಿರುವ ಜಾಗ ಖಾಲಿ ಮಾಡುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ನಿಂಗರಾಜು ಕುಟುಂಬದವರ ವಾಸದ ಮನೆಯ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಪುಟ್ಟಸಿದ್ದಮ್ಮ ಮತ್ತಿತರರು ಸೊಪ್ಪು ತರಕಾರಿ ಬೆಳೆಯುತ್ತಿರುವ ಜಾಗ, ನಿಂಗರಾಜು ಕುಟುಂಬದ ವಾಸದ ಮನೆ ಅರಣ್ಯ ಇಲಾಖಾ ವ್ಯಾಪ್ತಿಗೆ ಒಳಪಡದಿದ್ದರೂ ದಲಿತರೆಂಬ ಕಾರಣಕ್ಕೆ ಅಧಿಕಾರ ದುರುಪಯೋಗಪಡಿಸಿಕೊಂಡು, ನ್ಯಾಯಾಲಯವನ್ನೇ ಕಡೆಗಣಿಸಿ, ಸುಳ್ಳು ದೂರು ದಾಖಲಿಸಿಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಹಾರೋಹಳ್ಳಿ ನಟರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.