ಅರಕಲಗೂಡು: ಪಟ್ಟಣದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಬಡವರು, ನಿರ್ಗತಿಕರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ ಮಾತನಾಡಿ, ಪಕ್ಷದ ರಾಜ್ಯ ಘಟಕದ ಆದೇಶದ ಮೇರೆಗೆ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನ ತೆಗೆದುಕೊಂಡ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲೆಡೆ ಆಹಾರದ ಕಿಟ್ ಗಳನ್ನು ವಿತರಿಸಲಾಗುತ್ತಿದೆ.
ಇಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಪಪಂ ಸದಸ್ಯರು, ಪಕ್ಷದ ಕಾರ್ಯಕರ್ತರೊಂದಿಗೆ ಬಡವರಿಗೆ ಆಹಾರದ ಕಿಟ್ ವಿತರಿಸಲಾಗಿದೆ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯವರಿಗೆ ಸ್ಯಾನಿಟೈಸರ್, ಮಾಸ್ಕ್ ಗಳನ್ನು ವಿತರಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೈಂಡಿರುವ ಕ್ರಮಗಳು ಹಾಗೂ ಕೃಷಿಕರ ಸಮಸ್ಯೆಗಳನ್ನು ಪರಿಹರಿಸಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಕುರಿತು ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು, ಆರೋಗ್ಯ ಇಲಾಖೆಯವರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಕರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ಶಕ್ತಿಮೀರಿ ಶ್ರಮಿಸಲಾಗುತ್ತಿದೆ, ಇದಕ್ಕೆ ಪಕ್ಷಾತೀತವಾಗಿ ಸಹಕಾರ ನೀಡಬೇಕು. ಅಂತೆಯೇ ಅಶಕ್ತರು, ಬಡ ವರ್ಗದ ಜನರು ಹಸಿವಿನಿಂದ ಬಳಲದಂತೆ ಆಹಾರ ಕಿಟ್ ವಿತರಿಸಿ ನೋಂದವರ ನೋವಿಗೆ ಸ್ಪಂದಿಸುವುದು ಅತ್ಯವಶ್ಯಕವಾಗಿದೆ ಎಂದರು.
ಪಪಂ ಸದಸ್ಯರು, ಮುಖಂಡರು ಆಹಾರ ಕಿಟ್ ವಿತರಣಾ ಕಾರ್ಯದಲ್ಲಿ ಸಹಕರಿಸಿದರು.