ನ್ಯೂಸ್

ಅರಕಲಗೂಡು ತಾಲೂಕಿನ ಚಿಕ್ಕಗಾವನಹಳ್ಳಿಯಲ್ಲಿ ಕೆರೆಗೆ ವಿಷ ಬೆರೆಸಿದ ದುಷ್ಕರ್ಮಿಗಳ ಕುಕೃತ್ಯದಿಂದ ಮೀನುಗಳ ಮಾರಣಹೋಮ

ಅರಕಲಗೂಡು: ತಾಲೂಕಿನ ಚಿಕ್ಕಗಾವನಗಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ ಪರಿಣಾಮ ನೂರಾರು ಮೀನುಗಳ ಮಾರಣ ಹೋಮವಾಗಿವೆ. ಸತ್ತ ಮೀನುಗಳು ನೀರಿನಲ್ಲಿ ತೇಲುತ್ತಿದ್ದು ಗ್ರಾಮಸ್ಥರ ಮನ ಕಲಕಿದೆ.

ಊರ ಮುಂಭಾಗದ ಕೆರೆಗೆ ಗ್ರಾಮಸ್ಥರು ಒಟ್ಟಾಗಿ ಕಳೆದ ವರ್ಷ ಸುಮಾರು ೩೦ ಸಾವಿರ ವ್ಯಯಿಸಿ ವಿವಿಧ ತಳಿಯ ಮೀನು ಮರಿಗಳನ್ನು ಕೆರೆಗೆ ಬಿಟ್ಟಿದ್ದರು. ಬೆಳವಣಿಗೆ ಹಂತದಲಿದ್ದ ಮೀನುಗಳಿಗೆ ದುಷ್ಕರ್ಮಿಗಳು ವಿಷ ಹಾಕಿ ಕೊಂದು ಹಾಕಿದ್ದಾರೆ.
ಕೆರೆಗೆ ಸುಮಾರು‌ ೪೦ ಸಾವಿರ ಮೀನು ಮರಿಗಳನ್ನು ಬೆಳೆಸಲು ಬಿಡಲಾಗಿತ್ತು. ಎರಡು ದಿನಗಳ ಹಿಂದೆ ಕಿಡಿಗೇಡಿಗಳು ಕೆರೆಗೆ ಕಳೆನಾಶಕ ಹಾಕಿ ಮೀನುಗಳನ್ನು‌ ಸಾಯಿಸಿದ್ದು ಅಪಾರ ನಷ್ಟವಾಗಿದೆ.

ನಿತ್ಯವೂ ನೂರಾರು ಮೀನುಗಳು ಪ್ರಾಣ ಕಳೆದುಕೊಂಡು ನೀರಿನಲ್ಲಿ ಸತ್ತು ತೇಲುತ್ತಿವೆ. ಒಂದೆರಡು ದಿನದಲ್ಲಿ ಮೀನುಗಳು ಪೂರ್ತಿಯಾಗಿ ಸಾಯಲಿವೆ. ಕರೊನಾ ಲಾಕ್ ಡೌನ್ ನಿಂದಾಗಿ ಜನರು ಮೊದಲೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು ಇದೀಗ ಕೆರೆಯಲ್ಲಿದ್ದ ಜೀವಂತ ಮೀನುಗಳನ್ನು ಕಳೆದುಕೊಂಡು ಚಿಂತಿತರಾಗಿದ್ದೇವೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಸತ್ತ ಮೀನುಗಳನ್ನು ಕೆರೆ ದಡಕ್ಕೆ ತಂದು ಅಲ್ಲಲ್ಲಿ ರಾಶಿ ಹಾಕಲಾಗಿದ್ದು ದುರ್ವಾಸನೆ‌ ಸೂಸುತ್ತಿವೆ.
ಘಟನೆ ಕುರಿತು ಗ್ರಾಮಸ್ಥರು ಇಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ದೂರು ನೀಡಲು ನಿರ್ಧರಿಸಿದ್ದಾರೆ.