ನ್ಯೂಸ್

ಅರಕಲಗೂಡಿನಲ್ಲಿ ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದವರಿಗೆ ಮಾಸ್ಕ್ ವಿತರಿಸಿದ ಪೊಲೀಸರು

ಅರಕಲಗೂಡು: ಪಟ್ಟಣದ ಪೇಟೆ ಜಾಮಿಯಾ ಮಸೀದಿ ಮುಂಭಾಗ ಮುಖ್ಯ ರಸ್ತೆಯಲ್ಲಿ ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದ ಜನರಿಗೆ ಸಬ್ ಇನ್ಸ್ ಪೆಕ್ಟರ್ ವಿಜಯ್ ಕೃಷ್ಣ ಉಚಿತ ಮಾಸ್ಕ್ ವಿತರಿಸಿ ಕರೊನಾ ಸೋಂಕು ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಿದರು.

ಜಾಮಿಯಾ ಮಸೀದಿ ಅಧ್ಯಕ್ಷ ಖತೀಬ್ ಉ ರೆಹಮಾನ್ ಮಾತನಾಡಿ, ನಮ್ಮ ಗುರುಗಳ ಆದೇಶದಂತೆ ಮುಸಲ್ಮಾನ ಸಮುದಾಯದ ಮನೆಗಳಿಗೆ ಹೋಗಿ ಮಾಸ್ಕ್ ವಿತರಿಸಿ ರಮಜಾನ್ ಮಾಸದಲ್ಲಿ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಯಾರೂ ಬರಬಾರದು. ಸಾಮಾಜಿಕ ಅಂತರ ಕಾಪಾಡಿಕೊಂಡು ಹಬ್ಬವನ್ನು ಮನೆಯಲ್ಲೀಯೇ ಆಚರಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಕರೊನಾ ರೋಗ ಹರಡುವಿಕೆ ತಡೆಗಟ್ಟಲು ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎಲ್ಲರಿಗೂ ಅರಿವು ಮೂಡಿಸುವುದಾಗಿ ತಿಳಿಸಿದರು. ರಮಜಾನ್ ಮಾಸದ 30 ದಿನ ಉಪವಾಸ ಸಮಯದಲ್ಲಿ ಸಂಜೆಯ ವೇಳೆ ಮಾಡುವ ನಮಾಜ್ ಮುಖ್ಯವಾಗಿರುತ್ತದೆ. ಆದ್ದರಿಂದ ಮನೆಯಲ್ಲಿಯೇ ನಮಾಜ್ ಮಾಡುವಂತೆ ಮನವಿ ಮಾಡುವುದಾಗಿ ಹೇಳಿದರು.

ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಸಲಿಂ, ಅಲೀಂ , ಮುಖಂಡರಾದ ಜಬಿವುಲ್ಲಾ , ಹಫೀಜ್ ನಯಾ ಸಾಬ್, ನಯಾಜ್ ಅಹಮದ್, ಮಹ್ಕುಬುಲ್ ಅಹಮದ್, ಸಾಕಿಬ್ ಉರ್ ರೆಹಮಾನ್, ಮತ್ತಿತರರು ಇದ್ದರು.