ನ್ಯೂಸ್

ಅಮ್ಮೇರಹಳ್ಳಿ ಕೆರೆ ಕಟ್ಟೆ ಭದ್ರ

ಕೋಲಾರ: ನಗರ ಹೊರವಲಯದ ಅಮ್ಮೇರಹಳ್ಳಿ ಕೆರೆ ಕಟ್ಟೆಯಲ್ಲಿ ಕೆಲವೆಡೆ ಮಣ್ಣು ಕುಸಿದಿರುವ ಬಗ್ಗೆ ದೂರುಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಬುಧವಾರ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ಅಮ್ಮೇರಹಳ್ಳಿ ಕೆರೆಗೆ ಕೆಸಿ ವ್ಯಾಲಿ ನೀರು ಹರಿಯುತ್ತಿದ್ದು, ಕೆಟ್ಟೆಯ ಉದ್ದಕ್ಕೆ ಕೆಲವೆಡೆ ಮಣ್ಣು ಕುಸಿದಿರುವುದು ಕಂಡುಬಂದಿತ್ತು. ಮುನ್ನೆಚ್ಚರಿಕೆಯಾಗಿ ಕೆರೆ ಕಟ್ಟೆ ಭದ್ರಪಡಿಸುವಂತೆ ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಇತರರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು. ಬುಧವಾರ ಬೆಳಗ್ಗೆ ಕೋಡಿಯ ಒಂದು ಭಾಗದಲ್ಲಿ ನೀರು ಹರಿದಿದ್ದು, ಗುರುವಾರದೊಳಗೆ ಕೆರೆ ಭರ್ತಿಯಾಗಿ ಕೋಡಿ ಹರಿಯಲಿದೆ.

ಕೆರೆ ಕಟ್ಟೆ ದುರಸ್ತಿಯಾಗಿರುವ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಡಿಸಿ ಸತ್ಯಭಾಮ. ನಗರಸಭೆ ವತಿಯಿಂದ ಕೆರೆಕಟ್ಟೆ, ಜೆಸಿಬಿ ಮೂಲಕ ನಡೆಸುತ್ತಿರುವ ಸ್ವಚ್ಛತಾ ಕಾರ್ಯ ಪರಿಶೀಲಿಸಿದರಲ್ಲದೆ ಕಟ್ಟೆ ದುರಸ್ತಿಪಡಿಸಿರುವುದು ಮತ್ತು ನೀರು ಸೋರಿಕೆ ಆಗುತ್ತಿಲ್ಲವೆಂಬುದನ್ನು ದೃಢಪಡಿಸಿಕೊಂಡರು. ಕೆರೆ ಕೋಡಿ ಹರಿಯುವುದನ್ನು ವೀಕ್ಷಿಸಲು ಹೆಚ್ಚು ಜನ ಆಗಮಿಸುವುದರಿಂದ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತ ಆರ್.ಶ್ರೀಕಾಂತ್‌ಗೆ ಸೂಚಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯಭಾಮ, ಮಳೆಯಿಂದ ಕೆಲವೆಡೆ ಬಿರುಕು ಬಿಟ್ಟಿತ್ತು. ಕೆರೆ-ಕಟ್ಟೆ ಬಳಿ ನೀರು ಸೋರಿಕೆಯಾಗುತ್ತಿದ್ದ ಸ್ಥಳದಲ್ಲಿ ದುರಸ್ತಿಪಡಿಸಿರುವುದರಿಂದ ತೊಂದರೆ ಇಲ್ಲ. ಕೆರೆ ಕಟ್ಟೆ ಶಿಥಿಲಗೊಂಡಿಲ್ಲ ಎಂಬುದನ್ನು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳು ದೃಢಪಡಿಸಿದ್ದಾರೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಬಾಗಿನ ಅರ್ಪಣೆ ಕಾರ್ಯಕ್ರಮ ಆಯೋಜಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಸುರೇಶ್‌ಕುಮಾರ್, ಕೆ.ಸಿ. ವ್ಯಾಲಿ ಯೋಜನೆ ಅಧಿಕಾರಿ ಎಂ. ಕೃಷ್ಣ ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು.