ಬೆಂಗಳೂರು: ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಹಿಂದಿನ ಎಡಿಜಿಪಿ ಅಮೃತ್ ಪೌಲ್ ಹಾಗೂ ಇತರ ಅಧಿಕಾರಿ, ಸಿಬ್ಬಂದಿ ಬಂಧನದ ಬೆನ್ನಲ್ಲೇ ಹಗರಣದಲ್ಲಿ ಭಾಗಿಯಾಗಿರುವ ಪ್ರಭಾವಿಗಳ ಎದೆಯಲ್ಲಿ ನಡುಕು ಶುರುವಾಗಿದೆ. ಎಸ್ಐ ನೇಮಕಾತಿ ಅಕ್ರಮದಲ್ಲಿ ರಾಜಕೀಯ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವ ಲಾಬಿ ನಡೆಸಿದ್ದಾರೆ. ಅಲ್ಲದೆ, ಎಸ್ಐ ಹುದ್ದೆಗೆ 60 ಲಕ್ಷರಿಂದ 1 ಕೋಟಿ ರೂ. ವರೆಗೂ ಲಂಚ ಪಡೆದು ಕೆಲಸ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್, ಡಿವೈಎಸ್ಪಿಗಳಾದ ಶಾಂತಕುಮಾರ್, ವೈಜನಾಥ ರೇವೂರ, ಆರ್ಎಸ್ಐ ಲೋಕೇಶಪ್ಪ, ಎಸ್ಐ ಲೋಕೇಶ್, ಹೆಡ್ ಕಾನ್ಸ್ಟೇಬಲ್ ಲೋಕೇಶ್, ಎಸ್ಡಿಎ ಹರ್ಷ, ಎಫ್ಡಿಎ ಶ್ರೀಧರ್ ಎಂಬುವ ಈಗಾಗಲೆ ಸಿಐಡಿ ಬಂಧನಕ್ಕೆ ಒಳಗಾಗಿದ್ದಾರೆ. ಇವರಿಗೆ ದಲ್ಲಾಳಿಗಳಾಗಿ ಕೆಲಸ ಮಾಡಿದ್ದ ಸಬ್ ಇನ್ಸ್ಪೆಕ್ಟರ್ಗಳು ಸಹ ಬಂಧನಕ್ಕೆ ಒಳಗಾಗಿದ್ದಾರೆ. ಇದೀಗ ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿ ಮೇಲೆ ಒತ್ತಡ ಅಥವಾ ಪ್ರಭಾವ ಬಳಸಿರುವ ರಾಜಕೀಯ ಮುಖಂಡರು ಬಣ್ಣ ಬಯಲಾಗುತ್ತಾ ಎಂಬುದು ಕಾದು ನೋಡಬೇಕಿದೆ. 2019ರಲ್ಲಿ ಪೂರ್ವ ವಲಯ ಐಜಿಪಿ ಆಗಿದ್ದ ಅಮೃತ್ ಪೌಲ್, ಸೇವಾ ಹಿರಿತನದ ಆಧಾರದ ಮೇಲೆ 2020ರಲ್ಲಿ ಫೆಬ್ರವರಿ 2ರಂದು ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದು ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. ಒಂದಿಲ್ಲೊಂದು ಅಕ್ರಮ ಆರೋಪದಲ್ಲಿ ಅಮೃತ್ ಪೌಲ್ ಹೆಸರು ಪ್ರಸ್ತಾಪವಾಗಿತ್ತು. ಹೀಗಾಗಿ ನೇಮಕಾತಿ ವಿಭಾಗಕ್ಕೆ ನೇಮಕದ ಬಗ್ಗೆ ಆಕ್ಷೇಪಗಳು ಬಂದಿದ್ದವು. ಇದ್ಯಾವುದನ್ನು ಪರಿಗಣಿಸದ ಸರ್ಕಾರ ಹೊಣೆಗಾರಿಕೆ ನೀಡಿತ್ತು ಎನ್ನಲಾಗಿದೆ.
ಕಚೇರಿ ಪ್ರವೇಶ ಮಾಡುತ್ತಿದಂತೆ ಅಮೃತ್ ಪೌಲ್ಗೆ ಇಲಾಖೆಯಲ್ಲಿ ಠಿಕಾಣಿ ಹೂಡಿದ್ದ ಡಿವೈಎಸ್ಪಿ ಶಾಂತಕುಮಾರ್ ಆಪ್ತರಾದರು. ಅಕ್ರಮದಲ್ಲಿ ಪಳಗಿದ ‘ಕೈ’ ಎನ್ನಲಾಗಿದ್ದ ಶಾಂತಕುಮಾರ್ಗೆ 2021ರ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಎಡಿಜಿಪಿ ಹೆಚ್ಚಿನ ಜವಾಬ್ದಾರಿ ನೀಡಿದ್ದರು. ಪ್ರಶ್ನೆ ಪತ್ರಿಕೆ ಸಿದ್ಧತೆ, ಪರೀಕ್ಷಾ ಕೇಂದ್ರಗಳ ಆಯ್ಕೆ, ಪ್ರಶ್ನೆ ಪತ್ರಿಕೆಗಳ ಮುದ್ರಣ, ಪರೀಕ್ಷಾ ಕೇಂದ್ರಗಳಿಗೆ ಪೂರೈಕೆ ಮತ್ತು ಒಎಂಆರ್ ಶೀಟ್ಗಳ ಭದ್ರತೆ ಹೀಗೆ ಎಸ್ಐ ನೇಮಕಾತಿಯ ಪ್ರತಿ ಹಂತದಲ್ಲೂ ಶಾಂತಕುಮಾರ್ ಸಕ್ರಿಯವಾಗಿ ಪಾಲ್ಗೊಂಡಿದ್ದ. ಅಲ್ಲದೆ ಪರೀಕ್ಷೆಗೂ ಮುನ್ನ ಕೆಲ ಅಭ್ಯರ್ಥಿಗಳ ಜತೆ ಡೀಲ್ ಕುದುರಿಸಿದ ಶಾಂತಕುಮಾರ್, ಎಡಿಜಿಪಿ ಹೆಸರಿನಲ್ಲಿ ಪ್ರಸ್ತಾಪಿಸಿ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿದ್ದ. ಹಗರಣದಲ್ಲಿ ಬಂಧಿತನಾದ ಶಾಂತಕುಮಾರ್ ವಿಚಾರಣೆ ವೇಳೆ ಪರೀಕ್ಷಾ ಕಳ್ಳಾಟವನ್ನು ಬಯಲುಗೊಳಿಸಿದ. ತಾನು ಸ್ವೀಕರಿಸಿದ ಹಣದಲ್ಲಿ ಎಡಿಜಿಪಿಗೆ ಪಾಲು ಸೇರಿದೆ ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆ ಆಧರಿಸಿ ನಾಲ್ಕು ಬಾರಿ ಎಡಿಜಿಪಿಯನ್ನು ವಿಚಾರಣೆ ನಡೆಸಿ ಕೊನೆಗೆ ಬಂಧಿಸಿರುವುದಾಗಿ ಸಿಐಡಿ ಹೇಳಿದೆ.
ಪಿಎಸ್ಐ ಹಗರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಯುತ್ತಿದ್ದು, ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಮೃತ್ ಪೌಲ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಅದಕ್ಕೆ ಅವರನ್ನು ಬಂಧಿಸಲಾಗಿದೆ. ನಾವು ಯಾರನ್ನೂ ರಕ್ಷಿಸುವ ಕೆಲಸ ಮಾಡಲ್ಲ. | ಆರಗ ಜ್ಞಾನೇಂದ್ರ ಗೃಹ ಸಚಿವ
ಸ್ಟ್ರಾಂಗ್ ರೂಮ್ನಲ್ಲಿ ಟ್ಯಾಂಪರಿಂಗ್: ರಾಜ್ಯದಲ್ಲಿ ಎಸ್ಐ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆದ ಮೇಲೆ ಉತ್ತರ ಪತ್ರಿಕೆಗಳನ್ನು (ಒಎಂಆರ್ ಶೀಟ್) ಸಿಐಡಿ ಸ್ಟ್ರಾಂಗ್ ರೂಂಗೆ ರವಾನಿಸಲಾಗಿತ್ತು. ಇದರ ಜವಾಬ್ದಾರಿಯನ್ನು 6 ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗಿತ್ತು. ಮೊದಲೇ ಡೀಲ್ ನಡೆಸಿದ್ದ ಅಭ್ಯರ್ಥಿಗಳು ಒಎಂಆರ್ ಶೀಟ್ಗಳನ್ನು ಖಾಲಿ ಬಿಟ್ಟಿದ್ದರು. ಮೊದಲೇ ಪ್ಲಾ್ಯನ್ ಮಾಡಿದಂತೆ ಎಡಿಜಿಪಿ ಸೂಚನೆ ಮೇರೆಗೆ ಡಿವೈಎಸ್ಪಿ, ಇನ್ಸ್ಪೆಕ್ಟರ್ ಮತ್ತು ಎಸ್ಡಿಎ, ಎಫ್ಡಿಎ ಅಧಿಕಾರಿಗಳು, ಸಂಜೆ ಸ್ಟ್ರಾಂಗ್ ರೂಮ್ ಕೀ ತೆಗೆದು ಸಿಸಿ ಕ್ಯಾಮರಾ ಆಫ್ ಮಾಡುತ್ತಿದ್ದರು. ಆನಂತರ ತಮ್ಮ ಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ತೆಗೆದುಕೊಂಡು ಖಾಲಿ ಬಿಟ್ಟಿರುವ ಪ್ರಶ್ನೆಗಳಿಗೆ ಸರಿ ಉತ್ತರ ಬರೆದು ರ್ಯಾಂಕ್ ಬರುವಂತೆ ಮಾಡಿದ್ದರು.
ಈವರೆಗೆ 62 ಮಂದಿ ಜೈಲಿಗೆ: ನೇಮಕಾತಿ ಹಗರಣದಲ್ಲಿ ಈವರೆಗೆ 17 ಪೊಲೀಸರು, 8 ದಲ್ಲಾಳಿಗಳು, ಮೂವರು ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ನೌಕರರು, ಒಬ್ಬ ಸಹಾಯಕ ಇಂಜಿನಿಯರ್, ಪರೀಕ್ಷಾ ಕೇಂದ್ರಗಳ ನಾಲ್ವರು ಮೇಲ್ವಿಚಾರಕರು ಮತ್ತು 24 ಅಭ್ಯರ್ಥಿಗಳು, ಒಬ್ಬ ಅಭ್ಯರ್ಥಿಯ ತಂದೆ ಹಾಗೂ ಇನ್ನೊಬ್ಬ ಅಭ್ಯರ್ಥಿಯ ಪತಿಯನ್ನು ಸಿಐಡಿ ಬಂಧಿಸಿದೆ. ಒಟ್ಟಾರೆ ಬಂಧಿತರ ಸಂಖ್ಯೆ 62 ದಾಟಿದೆ. ಅಕ್ರಮದಲ್ಲಿ ಶಾಮೀಲಾದ ಆರೋಪದ ಮೇಲೆ ಸರ್ಕಾರಿ ನೌಕರರನ್ನು ಅಮಾನತುಗೊಳಿಸಲಾಗಿದೆ.
ಬೆಂಗಳೂರು: ಪಿಎಸ್ಐ ನೇಮಕ ಪ್ರಕರಣದಲ್ಲಿ ಅಕ್ರಮ ನಡೆದಿಲ್ಲ ಎಂದು ಗೃಹಸಚಿವರು ಸದನವನ್ನು ತಪ್ಪು ದಾರಿಗೆ ಎಳೆದರು. ಈಗ ಗೃಹಸಚಿವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಆಗ ಮಾತ್ರ ಆ ಸ್ಥಾನಕ್ಕೆ ಗೌರವ ಉಳಿಯುತ್ತದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ. ಗೃಹ ಸಚಿವರು ಸ್ವಾಭಿಮಾನಿಗಳಿದ್ದು, ಅವರೇ ರಾಜೀನಾಮೆ ನೀಡುತ್ತಾರೆ ಎಂದು ನಂಬಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸರ್ಕಾರ ನೇಮಕಾತಿ ಅಕ್ರಮದ ಅಂಗಡಿ ತೆಗೆದಿದ್ದು, ವ್ಯಾಪಾರ ಮಾಡಲು ಬಂದವರನ್ನು ಮಾತ್ರ ನೀವು ಹಿಡಿದಿದ್ದೀರಿ. ಅಂಗಡಿ ತೆರೆದವರನ್ನು, ಇದಕ್ಕೆ ಬೆಂಬಲ ನೀಡಿರುವವರನ್ನು ಬಂಧಿಸಿ ಎಂದು ಆಗ್ರಹಿಸಿದ್ದೆವು. ಈ ಅಕ್ರಮದ ಬಗ್ಗೆ ವಿರೋಧ ಪಕ್ಷದ ಶಾಸಕರು ಪ್ರಶ್ನೆ ಮಾಡಿದರೆ, ಅವರಿಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ಸರ್ಕಾರ ಕೊಡಬಾರದ ಕಿರುಕುಳ ನೀಡಿತು. ರಾಜ್ಯದ ಇತಿಹಾಸದಲ್ಲೇ ಇಂತಹ ಘಟನೆ ಮೊದಲ ಬಾರಿಗೆ ನಡೆದಿದೆ ಎಂದರು.
ಬಿಜೆಪಿಯ ಭಂಡತನ, ಭ್ರಷ್ಟಾಚಾರ ಮತ್ತು ಉದ್ಯೋಗ ಮಾರಾಟದಿಂದ ಕರ್ನಾಟಕದ ಸಾವಿರಾರು ಯುವಕರ ಕನಸು ನಾಶವಾಯಿತು. ನ್ಯಾಯಯುತ ತನಿಖೆಗೆ ಗೃಹ ಸಚಿವರನ್ನು ವಜಾಗೊಳಿಸಬೇಕು. ಪ್ರಧಾನಿ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಇದು ಬಿಜೆಪಿ ಸರ್ಕಾರದ ಎಲ್ಲರೂ ತಿನ್ನುತ್ತಾ, ಎಲ್ಲರೂ ಅರಳುವ ಕ್ಷಣವೇ? | ರಾಹುಲ್ ಗಾಂಧಿ ಎಐಸಿಸಿ ಮಾಜಿ ಅಧ್ಯಕ್ಷ ಪಿಎಸ್ಐ ಹಗರಣದ ಹೊಣೆಗಾರಿಕೆ ಆಗಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರದ್ದೇ. ಹೆಚ್ಚು, ಕಡಿಮೆ ಏನೂ ಇಲ್ಲ. ಎಡಿಜಿಪಿ ಬಂಧನ ಸಾಕಾಗುವುದಿಲ್ಲ. ಸಿಎಂ ಬೊಮ್ಮಾಯಿಯವರು ರಾಜೀನಾಮೆ ಕೊಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು. | ರಣದೀಪ್ ಸಿಂಗ್ ಸುರ್ಜೆವಾಲ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕಪಾಟಿನೊಳಗಿಂದ ಒಂದೊಂದೇ ಅಸ್ತಿಪಂಜರಗಳು ಹೊರಗೆ ಬೀಳುತ್ತಿವೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಅಮೃತಪೌಲ್ ಬಂಧನವೇ ಇದಕ್ಕೆ ಸಾಕ್ಷಿ. ಹಗರಣವೇ ನಡೆದಿಲ್ಲ ಎಂದು ಮೈಮೇಲೆ ಬರುತ್ತಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಈಗ ಏನು ಹೇಳುತ್ತಾರೆ? | ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ
ಮಲ್ಲೇಶ್ವರ ಅಭ್ಯರ್ಥಿಗೆ ಸಿಂಗಲ್ ಆರ್ಡರ್!: ಎಚ್.ಡಿ. ಕುಮಾರಸ್ವಾಮಿ ಈ ಪ್ರಕರಣದಲ್ಲಿ 300 ಕೋಟಿ ಅವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ. ಅವರು ಸರ್ಕಾರ ನಡೆಸಿರುವವರು, ಮಾಹಿತಿ ಇಲ್ಲದೆ ಮಾತನಾಡಿರುವುದಿಲ್ಲ. ನನ್ನ ಲೆಕ್ಕದ ಪ್ರಕಾರ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ನಡೆದಿದೆ. ಮಲ್ಲೇಶ್ವರ ಕ್ಷೇತ್ರದ ಅಭ್ಯರ್ಥಿಗೆ ಸಿಂಗಲ್ ಆರ್ಡರ್ ಆಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಮಾಗಡಿಯ ಅಭ್ಯರ್ಥಿಯ ವಿಚಾರಣೆ ಮಾಡದಂತೆ ಯಾರು ಬೆಂಬಲವಾಗಿ ನಿಂತರು, ಆ ಅಭ್ಯರ್ಥಿಯನ್ನು ಬಿಟ್ಟು ಕಳುಹಿಸಿದ್ದು ಯಾಕೆ, ನಂತರ 20 ದಿನ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಿ ಮತ್ತೆ ಆತನನ್ನು ವಿಚಾರಣೆಗೆ ಕರೆತಂದದ್ದು ಯಾಕೆ ಎಂಬುದು ಬಹಿರಂಗವಾಗಬೇಕು ಎಂದರು.
ಪಿಎಸ್ಐ ಹಗರಣದಲ್ಲಿ ಒಬ್ಬರು ಮಹಾನ್ ಕಿಂಗ್ಪಿನ್ ಇದ್ದಾರೆ. ಅವರ ಹೆಸರು ಹೇಳಿದರೆ ಸರ್ಕಾರವೇ ಬಿದ್ದು ಹೋಗುತ್ತದೆ. ನಾನು ಹಿಂದೆ ಹೇಳಿದಾಗ ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡ್ತಾರೆ ಎಂದಿದ್ದರು. ದಾಖಲೆ ಕೊಡಿ ಎಂದಿದ್ದರು. ಈಗ ಅವರು ಏನು ಹೇಳುತ್ತಾರೆ? ಸರ್ಕಾರದ ಮಟ್ಟದಲ್ಲಿ ಅತ್ಯಂತ ಪ್ರಭಾವಿ ಸ್ಥಾನಗಳಲ್ಲಿರುವ ಕಿಂಗ್ಪಿನ್ಗಳನ್ನು ಸಿಐಡಿ ಹಿಡಿಯಬೇಕಿದೆ. ಯಾವುದೇ ಕಾರಣಕ್ಕೂ ಈ ಪ್ರಭಾವಿಗಳು ತಪ್ಪಿಸಿಕೊಳ್ಳಬಾರದು. | ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ